‘ಸಾರ್ಕ್’ ವಿದೇಶ ಸಚಿವರ ಸಭೆಯಿಂದ ಅರ್ಧದಲ್ಲೇ ಹೋದ ಸುಶ್ಮಾ ಸ್ವರಾಜ್

Update: 2018-09-28 15:17 GMT

ನ್ಯೂಯಾರ್ಕ್, ಸೆ. 28: ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಭಾಗವಹಿಸಿದ ‘ಸಾರ್ಕ್’ ವಿದೇಶ ಸಚಿವರ ಸಭೆಯಿಂದ ಭಾರತದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅರ್ಧದಲ್ಲೇ ಹೊರ ನಡೆದ ಘಟನೆ ವರದಿಯಾಗಿದೆ.

ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 73ನೇ ಮಹಾಧಿವೇಶನದ ನೇಪಥ್ಯದಲ್ಲಿ ಗುರುವಾರ ನಡೆದ ಸಾರ್ಕ್ ಸಚಿವ ಮಂಡಳಿಯ ಅನೌಪಚಾರಿಕ ಸಭೆಯಲ್ಲಿ ಸುಶ್ವಾ ಸ್ವರಾಜ್ ಭಾಗವಹಿಸಿದ್ದರು. ನೇಪಾಳ ವಿದೇಶ ಸಚಿವ ಪ್ರದೀಪ್ ಕುಮಾರ್ ಗ್ಯಾವಳಿ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ ಹೇಳಿಕೆ ನೀಡಿದ ಬಳಿಕ ಸ್ವರಾಜ್ ಅರ್ಧದಲ್ಲೇ ನಿರ್ಗಮಿಸಿದರು. ಇದನ್ನು ಪಾಕಿಸ್ತಾನದ ವಿದೇಶ ಸಚಿವ ಕುರೇಶಿ ಟೀಕಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುರೇಶಿ, ‘‘ಇಲ್ಲ, ನಾನು ಸುಶ್ಮಾ ಸ್ವರಾಜ್‌ರೊಂದಿಗೆ ಮಾತನಾಡಿಲ್ಲ. ಈ ಘಟನೆಯನ್ನು ಧನಾತ್ಮಕವಾಗಿ ತೆಗೆದುಕೊಳ್ಳುವುದಾದರೆ, ಬಹುಶಃ ಅವರಿಗೆ ಹುಷಾರಿಲ್ಲ, ಹಾಗಾಗಿ, ಸಭೆಯಿಂದ ಅರ್ಧದಲ್ಲೇ ಎದ್ದು ಹೋಗಿದ್ದಾರೆ ಎಂದು ಹೇಳುತ್ತೇನೆ’’ ಎಂದರು.

ದೇಶದ ಹೇಳಿಕೆಯನ್ನು ನೀಡಿದ ಬಳಿಕ, ಬಹುಪಕ್ಷೀಯ ಸಭೆಯೊಂದರಿಂದ ಸದಸ್ಯರು ಎದ್ದು ಹೋಗುವುದು ಸಾಮಾನ್ಯ ಎಂದು ಭಾರತೀಯ ರಾಜತಾಂತ್ರಿಕ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿವೆ.

ಭಾರತೀಯ ವರ್ತನೆಯು ತಡೆಯಾಗಿದೆ: ಕುರೇಶಿ

‘‘ದೇಶವೊಂದರ ವರ್ತನೆಯು ಸಾರ್ಕ್ ಮತ್ತು ಅದರ ಸ್ಥಾಪಕರ ಆಶಯಗಳನ್ನು ವಿಫಲಗೊಳಿಸಿದೆ’’ ಎಂದು ಪಾಕಿಸ್ತಾನದ ವಿದೇಶ ವ್ಯವಹಾರಗಳ ಸಚಿವ ಶಾ ಮೆಹ್ಮೂದ್ ಕುರೇಶಿ ಭಾರತವನ್ನು ಗುರಿಯಾಗಿಸಿ ಹೇಳಿದ್ದಾರೆ.

 ‘‘ಸಭೆಯಲ್ಲಿ ಸುಶ್ಮಾ ಸ್ವರಾಜ್‌ರ ಮಾತುಗಳನ್ನು ನಾನು ಗಮನವಿಟ್ಟು ಕೇಳಿದ್ದೇನೆ. ಅವರು ಪ್ರಾದೇಶಿಕ ಸಹಕಾರದ ಬಗ್ಗೆ ಮಾತನಾಡಿದ್ದಾರೆ. ಆದರೆ, ವಲಯದ ದೇಶಗಳು ಒಟ್ಟಿಗೆ ಕೂತು ಮಾತನಾಡಲು ಸಿದ್ಧರಿಲ್ಲದಾಗ ಪ್ರಾದೇಶಿಕ ಸಹಕಾರ ಹೇಗೆ ಸಾಧ್ಯವಾಗುತ್ತದೆ? ಇಂಥ ಮಾತುಕತೆ ಮತ್ತು ಚರ್ಚೆಯಲ್ಲಿ ನೀವೇ ತಡೆಯಾಗಿದ್ದೀರಿ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News