ಪಠ್ಯಕ್ರಮ ಕಡಿತಗೊಳಿಸುವ ನಿರ್ಧಾರ ಸ್ವಾಗತಾರ್ಹ: ರಾಜ್ಯವರ್ಧನ್ ಸಿಂಗ್

Update: 2018-09-28 17:37 GMT

ಹೊಸದಿಲ್ಲಿ, ಸೆ.28: ಶಾಲೆಗಳಲ್ಲಿ ಪಠ್ಯಕ್ರಮವನ್ನು ಶೇ.50ರಷ್ಟು ಕಡಿತಗೊಳಿಸಿ ಕ್ರೀಡೆಯನ್ನು ಕಡ್ಡಾಯಗೊಳಿಸುವ ಮಾನವ ಸಂಪನ್ಮೂಲ ಇಲಾಖೆಯ ನಿರ್ಧಾರ ಸ್ವಾಗತಾರ್ಹ ಎಂದು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ. ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ 13ನೇ ವಾರ್ಷಿಕ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 2025ರ ವೇಳೆಗೆ ಭಾರತ ವಿಶ್ವದ ಮುಂದಾಳುವಾಗಲಿದೆ ಎಂದರು. ಕ್ರೀಡಾರಂಗದಲ್ಲಿ ಅಪ್ರತಿಮ ಸಾಧನೆ ತೋರಿದ ದೇಶದ ಕ್ರೀಡಾಪಟುಗಳನ್ನು ಅವರು ಶ್ಲಾಘಿಸಿದರು.

 ಈಗಿನ ಕ್ರೀಡಾಳುಗಳಲ್ಲಿರುವ ಮನೋಭಾವ ಈ ಹಿಂದಿನ ದಿನಗಳಲ್ಲಿ ಕಾಣುತ್ತಿರಲಿಲ್ಲ. ಈ ಬದಲಾವಣೆಗೆ ಸರಕಾರ ಮಾತ್ರ ಕಾರಣವಲ್ಲ. ಇದು ಸಂಘಟಿತ ಪ್ರಯತ್ನದ ಫಲವಾಗಿದೆ. ಹಿಮಾ ದಾಸ್, ಸ್ವಪ್ನಾ ಬರ್ಮನ್, ಸುಶೀಲ್ ಕುಮಾರ್, ರವೀಂದ್ರ ಜಡೇಜಾ ಇವರೆಲ್ಲಾ ಅತ್ಯಂತ ಹಿಂದುಳಿದ ವರ್ಗದವರು. ಸಾಧನೆಯ ಹಸಿವು ಇವರನ್ನು ಇಂದು ಮುಂಚೂಣಿಯಲ್ಲಿ ತಂದಿರಿಸಿದೆ ಎಂದವರು ಹೇಳಿದರು.

 ಶಿಕ್ಷಣವು ಕೇವಲ ತರಗತಿಯ ಕೊಠಡಿಗೆ ಸೀಮಿತಗೊಳ್ಳಬಾರದು. ಪಠ್ಯಕ್ರಮವನ್ನು ಶೇ.50ರಷ್ಟು ಕಡಿತಗೊಳಿಸಿ ಕ್ರೀಡೆಯನ್ನು ಕಡ್ಡಾಯವಾಗಿಸುವುದಾಗಿ ಇತ್ತೀಚೆಗೆ ಶಿಕ್ಷಣ ಸಚಿವರು ತಿಳಿಸಿದ್ದರು. ಯಾರು ಆಡುತ್ತಾರೋ ಅವರು ಗೆಲ್ಲುತ್ತಾರೆ ಎಂದು ನಮ್ಮ ಪ್ರಧಾನಿಯವರು ಕೂಡಾ ಹೇಳಿದ್ದಾರೆ. ಶಿಕ್ಷಣವು ತರಗತಿ ಕೊಠಡಿಗೆ ಮಾತ್ರ ಸೀ  ಮಿತವಾಗಿರಬಾರದು. ಆಟದ ಅಂಗಣದಲ್ಲೂ ಕಲಿಯುವುದು ಸಾಕಷ್ಟಿದೆ ಎಂದು ಸಚಿವ ರಾಥೋಡ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News