×
Ad

ಮಹಿಳಾ ವಿಶ್ವ ಟ್ವೆಂಟಿ-200 ಟೂರ್ನಮೆಂಟ್ : ಭಾರತ ತಂಡ ಪ್ರಕಟ

Update: 2018-09-28 23:50 IST
ಹರ್ಮನ್‌ಪ್ರೀತ್ ಕೌರ್ ನಾಯಕಿ

ಹೊಸದಿಲ್ಲಿ, ಸೆ.28: ಬಿಸಿಸಿಐನ ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಶುಕ್ರವಾರ ಮುಂಬರುವ ಮಹಿಳಾ ವಿಶ್ವ ಟ್ವೆಂಟಿ-20 ಟೂರ್ನಮೆಂಟ್‌ಗೆ ತಂಡವನ್ನು ಪ್ರಕಟಿಸಿದೆ.

ಸಮಿತಿಯು ಹರ್ಮನ್‌ಪ್ರೀತ್ ಕೌರ್‌ನ್ನು ನಾಯಕಿಯನ್ನಾಗಿ ಹಾಗೂ ಸ್ಮತಿ ಮಂಧಾನಾರನ್ನು ಉಪ ನಾಯಕಿಯನ್ನಾಗಿ ಆಯ್ಕೆ ಮಾಡಿದೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ನಡೆದಿದ್ದ 5 ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಹಾಗೂ ಜೆಮಿಮ್ಹಾ ರೊಡ್ರಿಗಸ್ 15 ಸದಸ್ಯೆಯರನ್ನು ಒಳಗೊಂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅನುಭವಿ ಬೌಲರ್ ಶಿಖಾ ಪಾಂಡೆಯವರನ್ನು ತಂಡದಿಂದ ಹೊರಗಿಡಲಾಗಿದ್ದು, ಆಲ್‌ರೌಂಡರ್ ಪೂಜಾ ವಸ್ತ್ರಕರ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ವಸ್ತ್ರಕರ್‌ರನ್ನು ಶ್ರೀಲಂಕಾ ವಿರುದ್ಧ ಸೀಮಿತ ಓವರ್ ಸರಣಿಯಿಂದ ಕೈಬಿಡಲಾಗಿತ್ತು. ಭಾರತ ತಂಡ ಹಿರಿಯ ವೇಗದ ಬೌಲರ್ ಜುಲನ್ ಗೋಸ್ವಾಮಿ ಅನುಪಸ್ಥಿತಿಯಲ್ಲಿ ಆಡಲಿದೆ. ಗೋಸ್ವಾಮಿ ಇತ್ತೀಚೆಗಷ್ಟೇ ಟ್ವೆಂಟಿ-20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

ಆರನೇ ಆವೃತ್ತಿಯ ವಿಶ್ವ ಟ್ವೆಂಟಿ-20 ಚಾಂಪಿಯನ್‌ಶಿಪ್ ವೆಸ್ಟ್‌ಇಂಡೀಸ್‌ನಲ್ಲಿ ನ.9 ರಿಂದ 24ರ ತನಕ ನಡೆಯಲಿದೆ. ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಲಿವೆ. ಭಾರತ ಬಿ ಗುಂಪಿನಲ್ಲಿ ನ್ಯೂಝಿಲೆಂಡ್, ಪಾಕಿಸ್ತಾನ, ಐರ್ಲೆಂಡ್ ಹಾಗೂ ಆಸ್ಟ್ರೇಲಿಯದೊಂದಿಗೆ ಸ್ಥಾನ ಪಡೆದಿದೆ. ಭಾರತ ನ.9 ರಂದು ಗಯಾನದಲ್ಲಿ ನ್ಯೂಝಿಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ನ.11 ರಂದು ಪಾಕಿಸ್ತಾನ ವಿರುದ್ಧ ನಿರ್ಣಾಯಕ ಗ್ರೂಪ್ ಪಂದ್ಯವನ್ನು ಆಡಲಿದೆ. ನ.15 ರಂದು ಐರ್ಲೆಂಡ್ ಹಾಗೂ 17 ರಂದು ಆಸ್ಟ್ರೇಲಿಯವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಹಾಗೂ ಆತಿಥೇಯ ವೆಸ್ಟ್‌ಇಂಡೀಸ್ ‘ಬಿ‘ ಗುಂಪಿನಲ್ಲಿ ಇಂಗ್ಲೆಂಡ್, ದಕ್ಷಿಣ ಆಫ್ರಿಕ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳೊಂದಿಗೆ ಸ್ಥಾನ ಪಡೆದಿದೆ. ನ.9ರಂದು ಬಾಂಗ್ಲಾದೇಶವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News