ಬಂಗಾಳ, ಸರ್ವಿಸಸ್, ತ್ರಿಪುರಾಕ್ಕೆ ಗೆಲುವು

Update: 2018-09-28 18:25 GMT

ಕೋಲ್ಕತಾ, ಸೆ.28: ಬಂಗಾಳ ತಂಡ ಅಸ್ಸಾಂ ವಿರುದ್ಧ 5 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸುವ ಮೂಲಕ ವಿಜಯ್ ಹಝಾರೆ ಟ್ರೋಫಿಯ ಸಿ ಗುಂಪಿನ ಲೀಗ್‌ನಲ್ಲಿ ಆಡಿರುವ 4 ಪಂದ್ಯಗಳ ಪೈಕಿ ಮೂರನೇ ಗೆಲುವು ದಾಖಲಿಸಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಅಸ್ಸಾಂ ತಂಡ ಕೇವಲ 150 ರನ್‌ಗೆ ಆಲೌಟಾಯಿತು. ಇನಿಂಗ್ಸ್‌ನ 2ನೇ ಓವರ್‌ನಲ್ಲಿ ಪರ್ವಿಝ್ ಅಝೀಝ್(1) ವಿಕೆಟನ್ನು ಕಳೆದುಕೊಂಡಿದ್ದ ಅಸ್ಸಾಂನ ಪರ ರಿಯಾನ್ ಪರಾಗ್(32) ಹಾಗೂ ಅಭಿಷೇಕ್ ಥಾಕೂರಿ(27)38 ರನ್ ಜೊತೆಯಾಟ ನಡೆಸಿದರು. ಇದು ಅಸ್ಸಾಂ ಇನಿಂಗ್ಸ್‌ನ ಗರಿಷ್ಠ ಜೊತೆಯಾಟವಾಗಿದೆ.

ಸ್ಪಿನ್ನರ್ ಪ್ರದೀಪ್ತ ಪ್ರಾಮಾಣಿಕ್ 27 ರನ್‌ಗೆ 4 ವಿಕೆಟ್‌ಗಳನ್ನು ಉರುಳಿಸಿ ಬಂಗಾಳದ ಯಶಸ್ವಿ ಬೌಲರ್ ಎನಿಸಿಕೊಂಡರು.

ಸುಲಭ ಗುರಿ ಪಡೆದಿದ್ದ ಬಂಗಾಳ ತಂಡ 5 ವಿಕೆಟ್‌ಗಳ ನಷ್ಟಕ್ಕೆ 25.4 ಓವರ್‌ಗಳಲ್ಲಿ ಗುರಿ ತಲುಪಿತು. ಆರಂಭಿಕ ಆಟಗಾರ ವಿವೇಕ್ ಸಿಂಗ್ ಆಕ್ರಮಣಕಾರಿ ಅರ್ಧಶತಕ(51,51ಎಸೆತ, 4 ಬೌಂಡರಿ,4 ಸಿಕ್ಸರ್) ದಾಖಲಿಸಿದರು. ನಾಯಕ ಮನೋಜ್ ತಿವಾರಿ 12 ರನ್ ಗಳಿಸಿ ಔಟಾದರು.

ಮತ್ತೊಂದು ಪಂದ್ಯದಲ್ಲಿ ಸರ್ವಿಸಸ್ ತಂಡ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಬಲಿಷ್ಠ ಗುಜರಾತ್ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿದೆ. ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡ ಸರ್ವಿಸಸ್ ತಂಡ ಪಾರ್ಥಿವ್ ಪಟೇಲ್ ನೇತೃತ್ವದ ಗುಜರಾತ್ ತಂಡವನ್ನು 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 219 ರನ್‌ಗೆ ನಿಯಂತ್ರಿಸಿತು. ರಾಜುಲ್ ಭಟ್ ಔಟಾಗದೆ 56 ರನ್ ಗಳಿಸಿದರು.

ಇದಕ್ಕೆ ಉತ್ತರವಾಗಿ ಸರ್ವಿಸಸ್ ತಂಡ ರವಿ ಚೌಹಾಣ್(ಔಟಾಗದೆ 106), ರಾಹುಲ್ ಸಿಂಗ್ ಔಟಾಗದೆ 55 ಹಾಗೂ ನಕುಲ್ ವರ್ಮಾ(46) ನೆರವಿನಿಂದ 38.1 ಓವರ್‌ಗಳಲ್ಲಿ 220 ರನ್ ಗಳಿಸಿತು. ಸರ್ವಿಸಸ್ ಟೂರ್ನಿಯಲ್ಲಿ ತಾನಾಡಿದ 5 ಪಂದ್ಯಗಳಲ್ಲಿ 4ನೇ ಗೆಲುವು ಸಾಧಿಸಿತು.

ದಿನದ ಮೂರನೇ ಪಂದ್ಯದಲ್ಲಿ ತ್ರಿಪುರಾ ತಂಡ ರಾಜಸ್ಥಾನವನ್ನು 48 ರನ್‌ಗಳಿಂದ ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ತ್ರಿಪುರಾ ತಂಡ ಭವಿಷ್ ಶತಕದ(107)ಸಹಾಯದಿಂದ 7 ವಿಕೆಟ್ ನಷ್ಟಕ್ಕೆ 242 ರನ್ ಗಳಿಸಿತು. ಎದುರಾಳಿ ತಂಡವನ್ನು 45.1 ಓವರ್‌ಗಳಲ್ಲಿ 194 ರನ್‌ಗೆ ಆಲೌಟ್ ಮಾಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News