ಮುಸ್ಲಿಮರಿಲ್ಲದ ಹಿಂದುತ್ವವಿಲ್ಲ ಎಂಬ ಆರೆಸ್ಸೆಸ್ ಹೇಳಿಕೆ ಬೋಗಸ್: ಪಿ.ವಿ.ಮೋಹನ್

Update: 2018-09-29 06:30 GMT

ಮಂಗಳೂರು, ಸೆ.29: ಮುಸ್ಲಿಮರಿಲ್ಲದೆ ಹಿಂದುತ್ವವಿಲ್ಲ ಎಂಬ ಆರೆಸ್ಸೆಸ್ ಹೇಳಿಕೆ ಬರೀ ಬೋಗಸ್ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ವಿ.ಮೋಹನ್ ವ್ಯಂಗ್ಯವಾಡಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆರೆಸ್ಸೆಸ್‌ಗೂ ಮುಸ್ಲಿಮ್ ಮತಗಳ ಮೇಲೆ ಕಣ್ಣು ಬಿದ್ದಿದೆ. ನರೇಂದ್ರ ಮೋದಿಗೆ ಮತ ಗಳಿಸಿಕೊಡುವ ಉದ್ದೇಶದಿಂದಲೇ ಆರೆಸ್ಸೆಸ್ ಇಂತಹ ಹೇಳಿಕೆ ನೀಡಿದೆ. ಆರೆಸ್ಸ್ಸೆಸ್‌ನ್ನು ನಿಷೇಧಿಸಬೇಕು. ಆಗಲೇ ದೇಶದಲ್ಲಿ ಶಾಂತಿ-ಸೌಹಾರ್ದ ನೆಲೆ ಕಾಣಲು ಸಾಧ್ಯ ಎಂದರು.

ಬಿಜೆಪಿ ಮುಳುಗಿ ಹೋಗುವ ಹಡಗು. ಹೇಗಾದರು ಅದನ್ನು ದಡ ಸೇರಿಸಬೇಕು. ಅದಕ್ಕಾಗಿ ಆರೆಸ್ಸೆಸ್ ಕಾರ್ಯಾಚರಿಸುತ್ತಿವೆ. ಕಾವೇರಿ, ಮಹಾದಾಯಿಯಂತಹ ಜ್ವಲಂತ ಸಮಸ್ಯೆಯ ಬಗ್ಗೆ ಮಾತನಾಡದ ಆರೆಸ್ಸೆಸ್ ಮತೀಯ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದೆ. ಆ ಮೂಲಕ ಬಿಜೆಪಿಗೆ ಲಾಭ ತಂದುಕೊಡಲು ಮುಂದಾಗುತ್ತಿವೆ ಎಂದು ಪಿ.ವಿ.ಮೋಹನ್ ಆಪಾದಿಸಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಬ್ರಿಟಿಷರಿಗಿಂತಲೂ ಅಪಾಯಕಾರಿಯಾಗಿದೆ. ಚುನಾವಣೆಗೆ ಮುನ್ನ ಚಕಾರವೆತ್ತದ ಕೆಲವೊಂದು ವಿಚಾರಗಳನ್ನು ಕಾರ್ಯರೂಪಕ್ಕೆ ತರುತ್ತಿವೆ. ನೋಟ್ ಬ್ಯಾನ್ ಬಗ್ಗೆ, ಜಿಎಸ್‌ಟಿ ಬಗ್ಗೆ ಮಾತನಾಡದ ಬಿಜೆಪಿ ಅದನ್ನು ಜಾರಿಗೆ ತಂದಿದೆ. ಅದೇ ವಿದೇಶದಲ್ಲಿರುವ ಕಪ್ಪುಹಣ, ನಿರುದ್ಯೋಗ ನಿವಾರಣೆಯ ಬಗ್ಗೆ ಈವರೆಗೂ ಏನನ್ನೂ ಮಾಡಿಲ್ಲ. ಇಂತಹ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಅ.2ರಿಂದ ನ.19ರವರೆಗೆ ದೇಶಾದ್ಯಂತ ಲೋಕ ಸಂಪರ್ಕ ಅಭಿಯಾನ ಕೈಗೊಳ್ಳಲಿದೆ. ಜಿಲ್ಲೆಯ 56 ಬೂತ್‌ಗಳಲ್ಲಿ 10 ಸಹಯೋಗಿ ಅಥವಾ ಒಡನಾಡಿ ತಂಡವನ್ನು ರಚಿಸಲಿದೆ. ಈ ತಂಡವು ಜನರ ಸೇವಾ ಕೇಂದ್ರವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಪಿ.ವಿ.ಮೋಹನ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಅಬ್ದುಲ್ ಸಲೀಂ, ನೀರಜ್ ಪಾಲ್, ಹೊನ್ನಯ್ಯ, ಸುಮಿತ್, ನಝೀರ್ ಬಜಾಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News