ಈ ಬಾರಿ ಸಾಹಿತ್ಯ ನೋಬೆಲ್ ಪ್ರಕಟಣೆ ಇಲ್ಲ ಯಾಕೆ ಗೊತ್ತೇ?
ಸ್ಟಾಕ್‍ಹೋಮ್, ಸೆ.29: ಸ್ವೀಡನ್ ನ ಸ್ಟಾಕ್‍ಹೋಮ್ ನಗರದಲ್ಲಿ ಮುಂದಿನ ವಾರ ಆರಂಭಗೊಳ್ಳಲಿರುವ ನೋಬೆಲ್ ಋತುವಿನಲ್ಲಿ ನೋಬೆಲ್ ಪ್ರಶಸ್ತಿಯ 70 ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆಂಬಂತೆ ನೋಬೆಲ್ ಸಾಹಿತ್ಯ ಪ್ರಶಸ್ತಿಯಿರುವುದಿಲ್ಲ. #MeToo ಹಗರಣವೇ ಇದಕ್ಕೆ ಕಾರಣವೆನ್ನಲಾಗಿದೆ.
ವೈದ್ಯಕೀಯ ಕ್ಷೇತ್ರದ ನೋಬೆಲ್ ಪ್ರಶಸ್ತಿಯನ್ನು ಸೋಮವಾರ ಕರೊಲಿನ್ ಸ್ಕಾ ಇನ್‍ಸ್ಟಿಟ್ಯೂಟ್ ಸಭಾಂಗಣದಲ್ಲಿ ನಡೆಯಲಿರುವ ನೋಬೆಲ್ ಅಧಿವೇಶನದಲ್ಲಿ ಘೋಷಿಸಲಾಗುವುದು. ಅದೇ ಸಮಯ ನೋಬೆಲ್ ಘೋಷಿಸುವ ಸ್ವೀಡಿಶ್ ಅಕಾಡಮಿಯ ಜತೆ ನಿಕಟ ಸಂಬಂಧವಿರುವ ಹಾಗೂ ಅತ್ಯಾಚಾರ ಆರೋಪ ಎದುರಿಸುತ್ತಿರುವ ಫ್ರಾನ್ಸ್ ದೇಶದ ಪ್ರಜೆ ಜೀನ್-ಕ್ಲಾಡ್ ಅರ್ನೌಲ್ಟ್ ಪ್ರಕರಣದ ತೀರ್ಪು ಏನಾಗಬಹುದೆಂಬ ಕುತೂಹಲ ಎಲ್ಲೆಡೆ ಇದೆ.
ನೋಬೆಲ್ ಪ್ರಶಸ್ತಿ ಪ್ರಥಮ ಬಾರಿಗೆ 1901ರಲ್ಲಿ ಆರಂಭಗೊಂಡಾಗಿನಿಂದ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ಕೂಡ ನೀಡಲಾಗುತ್ತಿದೆ. ಆದರೆ ಈ ಬಾರಿ ಮಾತ್ರ ನೋಬೆಲ್ ಅಕಾಡಮಿಗೆ ತಾನು ಜೀನ್-ಕ್ಲಾಡ್ ಅರ್ನೌಲ್ಟ್ ಜತೆಗಿರುವ ಸಂಬಂಧದ ವಿಚಾರದಲ್ಲಿ ಎದ್ದಿರುವ ವಿವಾದವನ್ನು ಹೇಗೆ ಪರಿಹರಿಸುವುದು ಎಂಬ ಚಿಂತೆ ಹುಟ್ಟಿಕೊಂಡಿದೆ. ಇದರಿಂದಾಗಿ ಈ ಬಾರಿಯ ಸಾಹಿತ್ಯ ಪ್ರಶಸ್ತಿಯನ್ನು ಅಕಾಡಮಿ ತಡೆಹಿಡಿದಿದ್ದು ಮುಂದಿನ ವರ್ಷ ಎರಡು ಸಾಹಿತ್ಯ ಪ್ರಶಸ್ತಿಗಳನ್ನು ನೀಡಲು ಉದ್ದೇಶಿಸಲಾಗಿದೆ.
ಎಪ್ಪತ್ತೆರಡು ವರ್ಷದ ಅರ್ನೌಲ್ಟ್ ಅವರು ಅಕಾಡಮಿ ಸದಸ್ಯ ಕತರೀನಾ ಫ್ರಾಸ್ಟೆನ್ಸನ್ ಜತೆ ವಿವಾಹವಾಗಿದ್ದು ಸ್ಟಾಕ್‍ಹೋಮ್ ನಗರದ ಸಾಂಸ್ಕೃತಿಕ ವಲಯಗಳಲ್ಲಿ ದಶಕಗಳಿಂದ ಚಿರಪರಿಚಿತರು. ಅವರ ಸಾಂಸ್ಕೃತಿಕ ಕ್ಲಬ್ ಫೋರಂ ಕಳೆದ ಹಲವಾರು ವರ್ಷಗಳಿಂದ ಅಕಾಡಮಿಯಿಂದ ಧನಸಹಾಯ ಪಡೆಯುತ್ತಿದೆ. ಆದರೆ ಅವರ ವಿರುದ್ಧ ಕೇಳಿ ಬಂದ ಅತ್ಯಾಚಾರ ಆರೋಪ ಇದೀಗ ಅಕಾಡಮಿಗೆ ತಲೆನೋವಾಗಿ ಕಾಡಿದೆ.
ಅಕಾಡಮಿಯ 18 ಸದಸ್ಯರ ಪೈಕಿ ಆರು ಅಜೀವ ಸದಸ್ಯರು. ಕೆಲವೊಂದು ಭಿನ್ನಾಭಿಪ್ರಾಯಗಳಿಂದ ಕೆಲಸ ಮಾಡುತ್ತಿಲ್ಲವಾಗಿದ್ದು ಇನ್ನಿತರ ಇಬ್ಬರು ಬೇರೆ ಕಾರಣಗಳಿಗಾಗಿ ಬದಿಗೆ ಸರಿದಿದ್ದಾರೆ. ಸದ್ಯ ಅಗತ್ಯವಿರುವ 12 ಸದಸ್ಯರ ಕೋರಂ ಇಲ್ಲದೇ ಇರುವುದರಿಂದ ಹಾಗೂ ಹೊಸ ಸದಸ್ಯರನ್ನು ನೇಮಕ ಮಾಡಲು ಅಸಾಧ್ಯವಾಗಿರುವುದರಿಂದ ತನ್ನ ಕಾರ್ಯನಿರ್ವಹಣೆಯಲ್ಲಿ ಬಹಳಷ್ಟು ಸುಧಾರಣೆ ತರಲು ಅಕಾಡಮಿ ಪಣ ತೊಟ್ಟಿದೆ.