ಸ್ಕರ್ಟ್ ಧರಿಸುವ ಗ್ರೀಸ್‌ನ ಈ ಕಾವಲುಪಡೆಗೀಗ 150ನೇ ವರ್ಷದ ಸಂಭ್ರಮ

Update: 2018-09-29 10:51 GMT

ಗ್ರೀಸ್‌ನ ಅಧ್ಯಕ್ಷರ ಕಾವಲುಪಡೆ ಎವರೆನ್ಸ್ ವಿಶ್ವದಲ್ಲಿ ವಿಶಿಷ್ಟ ಯೋಧರ ಗುಂಪಾಗಿದೆ. ಸ್ಕರ್ಟ್ ಧರಿಸುವ ಈ ಯೋಧರು ಅಥೆನ್ಸ್‌ನಲ್ಲಿ ಪ್ರವಾಸಿಗಳ ಆಕರ್ಷಣೆಯಾಗಿದ್ದು,ಇವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಾರೆ.

ಆಧುನಿಕ ಗ್ರೀಸ್‌ನ ಆರಂಭಕಾಲದಲ್ಲಿ ಅಂದರೆ 1868ರಲ್ಲಿ ಸ್ಥಾಪನೆಗೊಂಡ ಈ ಪಡೆಗೀಗ ಭರ್ತಿ 150 ವರ್ಷಗಳಾಗಿವೆ. ಸ್ಥಾಪನೆಗೊಂಡಾಗ ಈ ಪಡೆ ಪದಾತಿ ಯೋಧರನ್ನು ಹೊಂದಿದ್ದು,ಬಾಲ್ಕನ್ ಯುದ್ಧಗಳು,ಮೊದಲ ವಿಶ್ವಯುದ್ಧ, ಗ್ರೀಕ-ಇಟಲಿ ಯುದ್ಧ ಮುಂತಾದ ಸಮರಗಳಲ್ಲಿ ಹೋರಾಡಿ ತನ್ನ ಪರಾಕ್ರಮವನ್ನು ಮೆರೆದಿದೆ.

ಇಂದು ಅಥೆನ್ಸ್‌ನ ನ್ಯಾಷನಲ್ ಗಾರ್ಡನ್ಸ್‌ನ ಪುಟ್ಟ ಕಾಂಪೌಂಡ್‌ನಲ್ಲಿ ಸುಮಾರು 100 ಎವರೆನ್‌ಗಳು ವಾಸವಾಗಿದ್ದಾರೆ. ಇದು ಅವರು ಕಾವಲು ಕರ್ತವ್ಯ ನಿರ್ವಹಿಸುವ ಅಧ್ಯಕ್ಷರ ಅರಮನೆ ಮತ್ತು ಸಿಂಟಾಗ್ಮಾ ಸ್ಕ್ವೇರ್‌ನಲ್ಲಿರುವ ಹುತಾತ್ಮ ಯೋಧರ ಸ್ಮಾರಕದಿಂದ ಅನತಿ ದೂರದಲ್ಲಿದೆ.

 ಪ್ರತಿದಿನ ಸೂರ್ಯೋದಯದ ಬಳಿಕ ಗ್ರೀಸ್‌ನ ಪುರಾತನ ಕೋಟೆ ಆ್ಯಕ್ರೊಪೊಲಿಸ್ ಮೇಲೆ ಗ್ರೀಸ್ ಧ್ವಜವನ್ನು ಆರೋಹಿಸುವ ಎವರೆನ್‌ಗಳು ವಿದೇಶಿ ಸರಕಾರಗಳ ಮುಖ್ಯಸ್ಥರು ಅಧಿಕೃತ ಭೇಟಿಗಳನ್ನು ನೀಡಿದಾಗ ಗೌರವ ರಕ್ಷೆಯನ್ನು ಸಲ್ಲಿಸುತ್ತಾರೆ.

ಈ ವಿಶಿಷ್ಟ ಪಡೆ ಈಗಲೂ ಗ್ರೀಕ್ ಸೇನೆಯ ಭಾಗವಾಗಿದ್ದು, ಪ್ರತಿವರ್ಷ ಅತ್ಯಂತ ಎತ್ತರದ ಮತ್ತು ಸದೃಢ ಗ್ರೀಕ್ ಯುವಕರಿಂದ ಅರ್ಹರನ್ನು ಆಯ್ದು ಈ ಪಡೆಗೆ ನೇಮಿಸಿಕೊಳ್ಳಲಾಗುತ್ತದೆ.

ಈ ಪಡೆಗೆ ಸೇರಬಯಸುವವರು 1.87 ಮೀ ಮತ್ತು 2.10 ಮೀ.(6ಅಡಿ 1ಇಂಚು-6 ಅಡಿ 9 ಇಂಚು)ನಡುವೆ ಎತ್ತರವನ್ನು ಹೊಂದಿರಬೇಕು ಮತ್ತು ಈ ಹುದ್ದೆಗೆ ತಾವು ಅರ್ಹರು ಎನ್ನುವುದನ್ನು ಸಾಬೀತುಗೊಳಿಸಲು ಆರು ತಿಂಗಳ ಕಠಿಣ ತರಬೇತಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅರ್ಜಿ ಸಲ್ಲಿಸಿದವರ ಪೈಕಿ ಕೇವಲ ಮೂರನೇ ಒಂದು ಪಾಲು ಅಭ್ಯರ್ಥಿಗಳನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗುತ್ತದೆ.

ಕಾವಲು ಕಾಯುವುದು ಈ ಯೋಧರ ಮುಖ್ಯ ಕರ್ತವ್ಯವಾಗಿದೆ. ಮಳೆ,ಹಿಮಪಾತ ಅಥವಾ ಸುಡುಬಿಸಿಲಿರಲಿ,ತಮ್ಮ ಒಂದು ಗಂಟೆಯ ಕರ್ತವ್ಯದ ಅವಧಿಯಲ್ಲಿ ಇವರು ನಿಂತಲ್ಲಿಂದ ಒಂದು ಚೂರೂ ಕದಲುವಂತಿಲ್ಲ ಅಥವಾ ಯಾರೊಂದಿಗೂ ದೃಷ್ಟಿಯನ್ನು ಸೇರಿಸುವಂತಿಲ್ಲ. ತಮ್ಮ ಕಮಾಂಡರ್‌ಗಳಿಗೆ ಎಚ್ಚರಿಸಲು ಅವರು ತಮ್ಮ ರೈಫಲ್‌ನ್ನು ಕುಟ್ಟಿ ಶಬ್ದವನ್ನಷ್ಟೇ ಮಾಡಬಹುದು ಮತ್ತು ಅವರೊಂದಿಗೆ ಸಂವಹನ ನಡೆಸಲು ‘ಹೌದು’ಎನ್ನುವುದಕ್ಕೆ ಒಂದು ಬಾರಿ ಮತ್ತು ‘ಇಲ್ಲ’ಎನ್ನುವುದಕ್ಕೆ ಎರಡು ಬಾರಿ ಕಣ್ಣನ್ನು ಮಿಟುಕಿಸಬಹುದು. ಇದನ್ನು ಬಿಟ್ಟರೆ ಅವರು ಕರ್ತವ್ಯದ ಅವಧಿಯಲ್ಲಿ ಪಕ್ಕಾ ಶಿಲಾಮೂರ್ತಿಗಳೇ ಆಗಿರುತ್ತಾರೆ.

ಈ ಯೋಧರ ಸಮವಸ್ತ್ರ 20 ಕೆ.ಜಿ.ಗೂ ಅಧಿಕ ತೂಗುತ್ತದೆ ಮತ್ತು ಧರಿಸಲು ಕನಿಷ್ಠ 45 ನಿಮಿಷಗಳು ಬೇಕಾಗುತ್ತವೆ. ಅವರಿಗೆ ಸಮವಸ್ತ್ರ ಧರಿಸಲು ನೆರವಾಗಲೆಂದೆೇ ಸಹಾಯಕರನ್ನು ನೇಮಿಸಿರಲಾಗುತ್ತದೆ. ಈ ಸಮವಸ್ತ್ರದ ಮೇಲೆ ಧರಿಸುವ ದಪ್ಪ ಚರ್ಮದ,ಮಣಿಗಳಿಂದ ಕೂಡಿದ ರಕ್ಷಾಕವಚವು ಇನ್ನೊಂದು ಎರಡು ಕೆ.ಜಿ. ತೂಕವಿದ್ದರೆ ಹೆಗಲಿನಲ್ಲಿರುವ ರೈಫಲ್ ಏಳು ಕೆ.ಜಿ. ತೂಕವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News