ವಿದ್ಯುಚ್ಛಕ್ತಿ ಕಾಯ್ದೆ ತಿದ್ದುಪಡಿಯಿಂದ ರೈತರು, ಬಡವರಿಗೆ ಸಂಕಷ್ಟ : ಕೇಜ್ರಿವಾಲ್

Update: 2018-09-29 13:49 GMT

ಹೊಸದಿಲ್ಲಿ,ಸೆ.29: ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, 2003ರ ವಿದ್ಯುಚ್ಛಕ್ತಿ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳು ಅತ್ಯಂತ ಅಪಾಯಕಾರಿಯಾಗಿವೆ ಮತ್ತು ದೇಶದ ಬಡವರು ಹಾಗೂ ರೈತರನ್ನು ದೋಚಿ ಕೆಲವೇ ವಿದ್ಯುತ್ ಕಂಪನಿಗಳಿಗೆ ಲಾಭವನ್ನೊದಗಿಸುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿದರು.

ಉದ್ದೇಶಿತ ತಿದ್ದುಪಡಿ ಮಸೂದೆಯು ಕ್ರಾಸ್ ಸಬ್ಸಿಡಿ ಅಂದರೆ ವಿಭಿನ್ನ ಬಳಕೆದಾರ ವರ್ಗಗಳಿಗೆ ವಿಭಿನ್ನ ದರಗಳನ್ನು ವಿಧಿಸುವ ಪದ್ಧತಿಗೆ ಅಂತ್ಯ ಹಾಡಲಿದೆ ಮತ್ತು ಎಲ್ಲ ವರ್ಗಗಳಿಗೂ ವಿದ್ಯುತ್ ದರದಲ್ಲಿ 2ರಿಂದ 5 ಪಟ್ಟು ತೀವ್ರ ಹೆಚ್ಚಳಕ್ಕೆ ಕಾರಣವಾಗಲಿದೆ. ಹೀಗಾಗಿ ಬಡವರು ಮತ್ತು ರೈತರನ್ನು ಬಿಡಿ,ಮಧ್ಯಮವರ್ಗದವರಿಗೂ ವಿದ್ಯುತ್ ಶುಲ್ಕಗಳನ್ನು ಪಾವತಿಸುವುದು ಕಠಿಣವಾಗಲಿದೆ ಎಂದು ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕೇಜ್ರಿವಾಲ್ ಆರೋಪಿಸಿದರು.

ಅತ್ಯಂತ ಅಪಾಯಕಾರಿ ಮತ್ತು ಕರಾಳ ಸ್ವರೂಪದ್ದಾಗಿರುವ ಈ ತಿದ್ದುಪಡಿಗಳ ವಿರುದ್ಧ ತಾನು ಎಲ್ಲ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆಯುತ್ತೇನೆ ಮತ್ತು ಬಿಜೆಪಿಯೇತರ ಆಡಳಿತಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿಯಾಗುತ್ತೇನೆ. ಈ ಮಸೂದೆಯು ಪ್ರಧಾನಿ ನರೇಂದ್ರ ಮೋದಿಯವರಿಗೆ ನಿಕಟವಾಗಿರುವ ದೊಡ್ಡ ವಿದ್ಯುತ್ ಕಂಪನಿಗಳಿಗೆ ಲಾಭವನ್ನು ಮಾಡುವ ಉದ್ದೇಶವನ್ನು ಹೊಂದಿದೆ ಎಂದರು.

 ತಿದ್ದುಪಡಿಗಳು ವಿದ್ಯುತ್ ಕ್ಷೇತ್ರದಲ್ಲಿ ವಾಯದಾ ವ್ಯವಹಾರವನ್ನು ಆರಂಭಿಸಲೂ ಉದ್ದೇಶಿಸಿವೆ ಎಂದ ಅವರು,ಇದು ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕುಗಳನ್ನು ಕೇಂದ್ರಕ್ಕೆ ಒಪ್ಪಿಸುವ ಮೂಲಕ ರಾಜ್ಯ ಸರಕಾರಗಳ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ ಎಂದು ಆರೋಪಿಸಿದರು. ವಾಯದಾ ವ್ಯವಹಾರವು ಶ್ರೀಮಂತರ ಜೂಜಿಗೆ ಅವಕಾಶ ಕಲ್ಪಿಸುತ್ತದೆ ಮತ್ತು ಉತ್ಪಾದನೆ,ಸಟ್ಟಾಬಾಜಿ,ಪೂರೈಕೆ ಮತ್ತು ವಿದ್ಯುತ್ ಕಂಪನಿಗಳಲ್ಲಿಯ ಭ್ರಷ್ಟಾಚಾರಗಳ ಸಂಪೂರ್ಣ ಹೊರೆಯನ್ನು ಜನಸಾಮಾನ್ಯರು ಭರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಯು ಅಂಗೀಕಾರಗೊಳ್ಳುವುದನ್ನು ತಡೆಯಲು ಆಮ್ ಆದ್ಮಿ ಪಾಟಿಯು ಮಸೂದೆಯ ವಿರುದ್ಧ ಆಂದೋಲನವನ್ನು ಆರಂಭಿಸಲಿದೆ. ನಾವು ಜನರ ಬಳಿಗೆ ತೆರಳಿ, ಮೋದಿಯವರು ತನ್ನನ್ನು ವಿದ್ಯುತ್ ಕಂಪನಿಗಳಿಗೆ ಮಾರಿಕೊಂಡಿದ್ದಾರೆ ಎನ್ನುವುದನ್ನು ಅವರಿಗೆ ತಿಳಿಸುತ್ತೇವೆ ಎಂದರು.

ಕೇಂದ್ರವು ಮರುಮಾಹಿತಿಯನ್ನು ಕೋರಿ ಸೆ.7ರಂದು ಎಲ್ಲ ರಾಜ್ಯಗಳಿಗೆ ಉದ್ದೇಶಿತ ತಿದ್ದುಪಡಿಗಳನ್ನು ಕಳುಹಿಸಿದೆ. ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕರಿಸಲು ಅದು ಹುನ್ನಾರ ನಡೆಸಿದೆ ಎಂದು ಕೇಜ್ರಿವಾಲ್ ತಿಳಿಸಿದರು.

ತಾನು 2019ರಲ್ಲಿ ಮತ್ತೆ ಅಧಿಕಾರಕ್ಕೆ ಮರಳುವುದಿಲ್ಲ ಎನ್ನುವುದನ್ನು ಮೋದಿ ಸರಕಾರವು ಅರ್ಥ ಮಾಡಿಕೊಂಡಿರಬಹುದು ಮತ್ತು ಅದು ವಿದ್ಯುತ್ ಕಂಪನಿಗಳ ಋಣವನ್ನು ತೀರಿಸಲು ಪ್ರಯತ್ನಿಸುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News