ಹಿ. ಪ್ರದೇಶ: ವಿದೇಶೀಯರು ಸೇರಿದಂತೆ 16 ಚಾರಣಿಗರು ನಾಪತ್ತೆ

Update: 2018-09-29 14:25 GMT

ಶಿಮ್ಲ, ಸೆ.29: ಹಿಮಾಚಲಪ್ರದೇಶದ ಚಂಬಾ ಎಂಬಲ್ಲಿಗೆ ಚಾರಣಕ್ಕೆ ತೆರಳಿದ್ದ 10 ವಿದೇಶೀಯರೂ ಸೇರಿದಂತೆ 16 ಚಾರಣಿಗರು ಶನಿವಾರ ಕೆಟ್ಟ ಹವಾಮಾನದ ಕಾರಣ ಸಂಪರ್ಕ ಕಡಿದುಕೊಂಡಿದ್ದಾರೆ. ಇವರನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತಂಡ, ಸ್ಥಳೀಯ ಹಮಾಲಿ(ಕೂಲಿ)ಗಳು ಹಾಗೂ ಪರ್ವತಾರೋಹಣ ತಜ್ಞರು ನಾಪತ್ತೆಯಾಗಿರುವ ಚಾರಣಿಗರನ್ನು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸೆಪ್ಟೆಂಬರ್ ಮಧ್ಯಭಾಗದಿಂದ ರಾಜ್ಯದಲ್ಲಿ ಭಾರೀ ಮಳೆಯ ಜೊತೆಗೆ ಹಿಮಪಾತವಾಗುತ್ತಿದ್ದು, ಮನಾಲಿ ರಸ್ತೆ ಸಂಪರ್ಕ ವ್ಯವಸ್ಥೆಗೆ ಹಾನಿಯಾಗಿದೆ. ದುರ್ಗಮ ಪ್ರದೇಶದ ಜನರಿಗೆ ಭಾರತೀಯ ವಾಯುಪಡೆಯ ಯೋಧರು ವಿಮಾನದ ಮೂಲಕ ಆಹಾರದ ಪೊಟ್ಟಣ ತಲುಪಿಸುವ ಜೊತೆಗೆ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯವನ್ನೂ ನಡೆಸುತ್ತಿದ್ದಾರೆ.

ಈ ವಾರದ ಆರಂಭದಲ್ಲಿ ರಾಜ್ಯದಲ್ಲಿ ಚಾರಣಕ್ಕೆ ತೆರಳಿದ್ದ ಐಐಟಿ ರೂರ್ಕಿಯ 45 ವಿದ್ಯಾರ್ಥಿಗಳಿದ್ದ ತಂಡ ಹಿಮಗುಡ್ಡೆಯಲ್ಲಿ ಸಿಲುಕಿಕೊಂಡಿತ್ತು. ಇವರನ್ನು ಜಿಲ್ಲಾಡಳಿತ ಹಾಗೂ ಗಡಿ ರಸ್ತೆ ಸಂಘಟನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News