‘ಕೋಬ್ರಾಪೋಸ್ಟ್’ ಮೇಲಿನ ನಿರ್ಬಂಧವನ್ನು ರದ್ದುಗೊಳಿಸಿದ ದಿಲ್ಲಿ ನ್ಯಾಯಾಲಯ
ಹೊಸದಿಲ್ಲಿ,ಸೆ.29: ಜಾಲತಾಣ ಸುದ್ದಿ ಮಾಧ್ಯಮ ‘ಕೋಬ್ರಾಪೋಸ್ಟ್’ ತನ್ನ ಕುಟುಕು ಕಾರ್ಯಾಚರಣೆಯನ್ನು ಸಾರ್ವಜನಿಕಗೊಳಿಸುವುದರ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ದಿಲ್ಲಿ ನ್ಯಾಯಾಲಯ ರದ್ದುಗೊಳಿಸಿದೆ.
ಸಾರ್ವಜನಿಕ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮಾನನಷ್ಟ ಪ್ರಕರಣದಲ್ಲಿ ನಿಯಂತ್ರಕ ಪರಿಹಾರ ಪಡೆಯಲು ಹೆಚ್ಚಿನ ಮಿತಿಯನ್ನು ಸಾಧಿಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ವಿವಿಧ ಸುದ್ದಿ ಸಂಸ್ಥೆಗಳು ಪಾವತಿ ಸುದ್ದಿಯಂತಹ ಅನೈತಿಕ ಕಾರ್ಯದಲ್ಲಿ ತೊಡಗಿವೆ ಎಂದು ಕೋಬ್ರಾ ಪೋಸ್ಟ್ ಆರೋಪಿಸಿತ್ತು. ಈ ಪ್ರಕರಣದ ವಿಚಾರಣೆಯು ಬಾಕಿಯಿರುವಂತೆಯೇ ದೈನಿಕ ಭಾಸ್ಕರ್ ಕಾರ್ಪೊರೇಶನ್ ಲಿ.,ನ ಮನವಿಯ ಮೇರೆಗೆ ಕೇವಲ ಒಂದು ಪಕ್ಷವನ್ನು ಆಲಿಸಿ ತಡೆಯನ್ನು ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ನ್ಯಾಯಾಧೀಶ ಎಸ್.ರವೀಂದ್ರ ಭಟ್ ಮತ್ತು ಎ.ಕೆ.ಚಾವ್ಲಾ ಅವರ ಪೀಠವು ತಿಳಿಸಿದೆ.
ಆರೋಪವು ಸುಳ್ಳು ಮತ್ತು ಮಾನಹಾನಿಕರವಾಗಿದೆ ಎಂದು ಎಲ್ಲ ರೀತಿಯಲ್ಲೂ ಸಾಬೀತುಪಡಿಸದ ಹೊರತು ತಡೆಯಾಜ್ಞೆ ವಿಧಿಸುವುದು ಸರಿಯಲ್ಲ ಎಂದು ಪೀಠ ತಿಳಿಸಿದೆ. ವಿಷಯದ ವಾದ ಪ್ರತಿವಾದಗಳನ್ನು ಆಲಿಸಿದ ನಂತರ ಮಧ್ಯಂತರ ಪರಿಹಾರವನ್ನು ನೀಡುವ ಜವಾಬ್ದಾರಿಯನ್ನು ಪೀಠವು ಏಕ ಸದಸ್ಯರಿಗೆ ಮರು ಒಪ್ಪಿಸಿದೆ. ಅಕ್ಟೋಬರ್ ಮೂರರಂದು ಏಕ ಸದಸ್ಯರ ಮುಂದೆ ಹಾಜರಾಗುವಂತೆ ನ್ಯಾಯಪೀಠವು ಎರಡೂ ಪಕ್ಷಗಳಿಗೆ ಸೂಚಿಸಿದೆ. ‘ಕೋಬ್ರಾಪೋಸ್ಟ್’ ನಡೆಸಿದ ಕುಟುಕು ಕಾರ್ಯಾಚರಣೆಯನ್ನು ಅಪರೇಶನ್ 136:ಭಾಗ 1 ಹೆಸರಿನಲ್ಲಿ ಬಿಡುಗಡೆ ಮಾಡಿತ್ತು.
ಈ ವಿಡಿಯೊದಲ್ಲಿ ಪಾವತಿ ಸುದ್ದಿ, ಕಪ್ಪು ಹಣ ಪಡೆದಿರುವುದು ಹೀಗೆ ಹಲವು ಅನೈತಿಕ ಚಟುವಟಿಕಗೆಳಲ್ಲಿ ತೊಡಗಿರುವ ಹದಿನೇಳು ಸುದ್ದಿ ಸಂಸ್ಥೆಗಳನ್ನು ತೋರಿಸಲಾಗಿತ್ತು. ಇದರ ವಿರುದ್ಧ ಪ್ರಮುಖ ಪತ್ರಿಕೆ ದೈನಿಕ್ ಭಾಸ್ಕರ್ ಆಕ್ಷೇಪ ವ್ಯಕ್ತಪಡಿಸುತ್ತಾ, ಈ ವಿಡಿಯೊ ಬಿಡುಗಡೆ ಮಾಡಿದರೆ ಅದರಿಂದ ಸಂಸ್ಥೆಯ ವರ್ಚಸ್ಸಿಗೆ ಸರಿಪಡಿಸಲಾಗದಷ್ಟು ನಷ್ಟ ಮತ್ತು ಹಾನಿಯಾಗಲಿದೆ ಎಂದು ದೂರಿಕೊಂಡಿತ್ತು.