ಭಾರತಕ್ಕೆ ಪರ್ಯಾಯ ತೈಲ ಪೂರೈಕೆ: ಅಮೆರಿಕದಿಂದ ಭರವಸೆ

Update: 2018-09-29 15:09 GMT

ನ್ಯೂಯಾರ್ಕ್, ಸೆ. 29: ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ಕಠಿಣ ಆರ್ಥಿಕ ದಿಗ್ಬಂಧನಗಳು ನವೆಂಬರ್ 4ರಿಂದ ಜಾರಿಗೆ ಬರಲಿದ್ದು, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದಂತೆ ಅಮೆರಿಕ ತನ್ನ ಮಿತ್ರ ದೇಶಗಳಿಗೆ ತಾಕೀತು ಮಾಡಿದೆ.

ಅಮೆರಿಕದ ಈ ನಿರ್ಧಾರದಿಂದ ಭಾರತ ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಅದು ತನ್ನ ತೈಲ ಅವಶ್ಯಕತೆಯ ಹೆಚ್ಚಿನ ಭಾಗವನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳುತ್ತಿದೆ. ಅಮೆರಿಕದ ಒತ್ತಡಕ್ಕೆ ಒಳಗಾಗಿ ಇರಾನ್‌ನಿಂದ ತೈಲ ಆಮದನ್ನು ನಿಲ್ಲಿಸಿದರೆ ಅದರ ಆರ್ಥಿಕತೆ ಹದಗೆಡುವ ಅಪಾಯವಿದೆ.

ಆದರೆ, ಭಾರತದ ತೈಲ ಅವಶ್ಯಕತೆ ಬಗ್ಗೆ ಅಮೆರಿಕಕ್ಕೆ ಅರಿವಿದೆ ಹಾಗೂ ‘ನಮ್ಮ ಮಿತ್ರ ಭಾರತದ ಆರ್ಥಿಕತೆ ಹದಗೆಡದಂತೆ ನೋಡಿಕೊಳ್ಳುವುದಕ್ಕಾಗಿ ಪರ್ಯಾಯ ತೈಲ ಪೂರೈಕೆಯ ಬಗ್ಗೆ ನಾವು ಯೋಚಿಸುತ್ತಿದ್ದೇವೆ’ ಎಂದು ಟ್ರಂಪ್ ಆಡಳಿತದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘‘ಭಾರತಕ್ಕೆ ಅಧಿಕ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುವ ಅವಶ್ಯಕತೆಯಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಮಿತ್ರ ಭಾರತದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದನ್ನು ತಪ್ಪಿಸಲು ಯಾವ ರೀತಿಯಲ್ಲಿ ಪರ್ಯಾಯ ತೈಲ ಪೂರೈಕೆ ಮಾಡಬಹುದು ಎಂಬ ಬಗ್ಗೆ ಚಿಂತನೆ ನಡೆದಿದೆ’’ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯ ವಲಯ ಬ್ಯೂರೋದ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಆಲಿಸ್ ವೆಲ್ಸ್ ಪಿಟಿಐ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಉಲ್ಲಂಘಕರಿಗೆ ಅಮೆರಿಕದ ಬ್ಯಾಂಕಿಂಗ್ ವ್ಯವಸ್ಥೆಗೆ ಪ್ರವೇಶ ನೀಷೇಧ

2015ರ ಇರಾನ್ ಪರಮಾಣು ಒಪ್ಪಂದದಿಂದ ಮೇ ತಿಂಗಳಲ್ಲಿ ಅಮೆರಿಕ ಹೊರಬಂದಿದೆ ಹಾಗೂ ಹೊರಬಂದ ಬೆನ್ನಿಗೇ ಇರಾನ್ ವಿರುದ್ಧ ಸರಣಿ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದೆ.

ಮೊದಲ ಹಂತದ ದಿಗ್ಬಂಧನ ಈಗಾಗಲೇ ಚಾಲ್ತಿಯಲ್ಲಿದೆ ಹಾಗೂ ನವೆಂಬರ್ 4ರಂದು ದಿಗ್ಬಂಧನವು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ಆ ವೇಳೆಗೆ, ಭಾರತ ಸೇರಿದಂತೆ ಎಲ್ಲ ದೇಶಗಳು ಇರಾನ್ ತೈಲ ಆಮದನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಅಮೆರಿಕ ಬಯಸಿದೆ.

ಇರಾನ್‌ನೊಂದಿಗೆ ವ್ಯಾಪಾರ ಮುಂದುವರಿಸುವ ಯಾವುದೇ ದೇಶಕ್ಕೆ ಅಮೆರಿಕದ ಬ್ಯಾಂಕಿಂಗ್ ಮತ್ತು ಆರ್ಥಿಕ ವ್ಯವಸ್ಥೆಗೆ ಪ್ರವೇಶ ನಿರಾಕರಿಸಲಾಗುವುದು ಎಂಬುದಾಗಿ ಅಮೆರಿಕ ಬೆದರಿಕೆ ಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News