×
Ad

ನವವಿವಾಹಿತೆ ಮೇಲೆ ಪತಿ ಸೇರಿ 7 ಮಂದಿಯಿಂದ ಅತ್ಯಾಚಾರ: ಆರೋಪ

Update: 2018-09-29 21:28 IST

ಚಂಡೀಗಢ, ಸೆ.29: ನವವಿವಾಹಿತೆಯ ಮೇಲೆ ಆಕೆಯ ಪತಿ, ಸಂಬಂಧಿಕರು ಹಾಗೂ ಮಾಂತ್ರಿಕ ಸೇರಿದಂತೆ 7 ಮಂದಿ ಅತ್ಯಾಚಾರ ನಡೆಸಿರುವ ಬಗ್ಗೆ ದೂರು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.12ರಂದು ಯುವತಿಯ ವಿವಾಹ ಯಮುನಾನಗರದ ನಿವಾಸಿಯೊಂದಿಗೆ ನಡೆದಿದೆ. 

ಮದುವೆಯಾದ ಕೆಲವು ದಿನಗಳಲ್ಲೇ ಯುವತಿಯ ತಂದೆಗೆ ಕರೆ ಮಾಡಿದ್ದ ವರನ ಕಡೆಯವರು ಯುವತಿ ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದಾಳೆ ಎಂದು ಹೇಳಿದ್ದರು ಎನ್ನಲಾಗಿದೆ. ಇದರಿಂದ ಆತಂಕಗೊಂಡ ಯುವತಿಯ ತಂದೆ ಅಳಿಯನ ಮನೆಗೆ ಬಂದಾಗ ತನ್ನ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ಚೇತರಿಸಿಕೊಂಡ ಬಳಿಕ ಆಕೆ ತನ್ನ ಮೇಲಾದ ಅತ್ಯಾಚಾರವನ್ನು ತಿಳಿಸಿದ್ದಾಳೆ ಎಂದು ಯುವತಿಯ ತಂದೆ ತಿಳಿಸಿದ್ದಾರೆ. ಮದುವೆಯಾದ ಬಳಿಕ ಮೊದಲ ದಿನದಂದು ವರನ ಮನೆಯವರು ಮನೆಗೆ ಮಾಂತ್ರಿಕನೊಬ್ಬನನ್ನು ಕರೆಸಿದ್ದಾರೆ. ಕೆಲವೊಂದು ತಾಂತ್ರಿಕ ವಿಧಿವಿಧಾನಗಳನ್ನು ನಡೆಸಿದ್ದ ಆತ ವಧುವಿನ ಜೊತೆ ದೈಹಿಕ ಸಂಪರ್ಕ ನಡೆಸಲು ವರನ ಹಿರಿಯ ಸಹೋದರ ಹಾಗೂ ನಾದಿನಿಯ ಪತಿಗೆ ತಿಳಿಸಿದ್ದಾನೆ.

ಮುಂದಿನ ಮೂರು ದಿನವೂ ಈ ತಾಂತ್ರಿಕ ವಿಧಿವಿಧಾನ ಮುಂದುವರಿದಿದ್ದು ತನ್ನ ಮೇಲೆ ಹಲವಾರು ಬಾರಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಇದರಲ್ಲಿ ಮಾಂತ್ರಿಕನೂ ಸೇರಿದ್ದಾನೆ. ಸಾಕ್ಷ ನಾಶ ಮಾಡಲು ಬಳಿಕ ತನ್ನ ಬಟ್ಟೆಯನ್ನು ಸುಟ್ಟುಹಾಕಿರುವ ಸಾಧ್ಯತೆಯಿದೆ. ಈ ಪಿತೂರಿಯಲ್ಲಿ ತನ್ನ ಅತ್ತೆ ಹಾಗೂ ಇಬ್ಬರು ನಾದಿನಿಯರೂ ಶಾಮೀಲಾಗಿದ್ದಾರೆ ಎಂದು ಯುವತಿ ತಿಳಿಸಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News