ಮೂರು ಮಕ್ಕಳನ್ನು ಹೊಂದಿದ್ದಕ್ಕಾಗಿ ವಜಾಗೊಂಡ ಅಂಗನವಾಡಿ ಕಾರ್ಯಕರ್ತೆಯಿಂದ ಹೈಕೋರ್ಟ್‌ಗೆ ಮೊರೆ

Update: 2018-09-29 16:55 GMT

ಮುಂಬೈ, ಸೆ.29: ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಮೂಲಕ ‘ಸಣ್ಣ ಕುಟುಂಬ’ದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ತನ್ನನ್ನು ಸೇವೆಯಿಂದ ವಜಾಗೊಳಿಸಿರುವ ರಾಜ್ಯ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಮಹಾರಾಷ್ಟ್ರದ ಅಂಗನವಾಡಿ ಕಾರ್ಯಕರ್ತೆಯೋರ್ವರು ಬಾಂಬೆ ಉಚ್ಚ ನ್ಯಾಯಾಲಯದ ಮೆಟ್ಟಿಲುಗಳನ್ನೇರಿದ್ದಾರೆ.

ತನ್ವಿ ಸೋದಾಯಿ ಅವರು 2002ರಲ್ಲಿ ರಾಜ್ಯದ ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ(ಐಸಿಡಿಎಸ್)ಯೋಜನೆಯಡಿ ಕೆಲಸಕ್ಕೆ ಸೇರಿದ್ದು,2012ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಭಡ್ತಿ ಪಡೆದಿದ್ದರು.

ಮೂವರು ಮಕ್ಕಳನ್ನು ಹೊಂದಿರುವುದಕ್ಕಾಗಿ ಆಕೆಯನ್ನು ಈ ವರ್ಷದ ಮಾರ್ಚ್‌ನಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು.

2014ರ ಸರಕಾರಿ ಆದೇಶದಂತೆ ಐಸಿಡಿಎಸ್ ಯೋಜನೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿಯ ನೌಕರರು ಇಬ್ಬರಿಗಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವಂತಿಲ್ಲ ಎಂದು ವಜಾ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.

2014ರಲ್ಲಿ ಸರಕಾರಿ ಆದೇಶ ಹೊರಬಿದ್ದಾಗ ತಾನು ಅದಾಗಲೇ ಮೂರನೇ ಮಗುವಿಗಾಗಿ ಎಂಟು ತಿಂಗಳ ಗರ್ಭಿಣಿಯಾಗಿದ್ದೆ,ಹೀಗಾಗಿ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕಾರಣಕ್ಕೆ ತನ್ನನ್ನು ಸೇವೆಯಿಂದ ವಜಾಗೊಳಿಸಿರುವುದು ಅಕ್ರಮವಾಗಿದೆ ಎಂದು ತನ್ವಿ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.

ಅವರು ಈ ವರ್ಷದ ಎಪ್ರಿಲ್‌ನಲ್ಲೇ ನ್ಯಾಯಾಲಯದ ಮೊರೆ ಹೋಗಿದ್ದರಾದರೂ ಕಳೆದ ವಾರವಷ್ಟೇ ಅವರ ಅರ್ಜಿಯು ಮೊದಲ ಬಾರಿಗೆ ವಿಚಾರಣೆಗೆ ಬಂದಿದೆ.

 ತನ್ವಿಯ ನೇಮಕಾತಿ ಆದೇಶದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವಂತಿಲ್ಲ ಎಂಬ ನಿಯಮವನ್ನು ಉಲ್ಲೇಖಿಸಲಾಗಿಲ್ಲ ಎಂದು ಅವರ ಪರ ವಕೀಲ ಅಜಿಂಕ್ಯ ಎಂ.ಉದನೆ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ತನ್ವಿಯವರ ಪ್ರಕರಣದಲ್ಲಿ ನಿಯಮವನ್ನು ಪೂರ್ವಾನ್ವಯಗೊಳಿಸಲಾಗಿದೆ ಎಂಬ ಅವರ ವಾದವನ್ನು ವಿರೋಧಿಸಿದ ಸರಕಾರದ ಪರ ಅಡ್ವೊಕೇಟ್ ಜನರಲ್ ಅಶುತೋಷ ಕುಂಭಕೋಣಿ ಅವರು,ಸರಕಾರವು 2005ರಿಂದಲೇ ಸಣ್ಣ ಕುಟುಂಬ ನಿಯಮಗಳಿಗೆ ಪ್ರಚಾರ ನೀಡುತ್ತಿದ್ದು,ಈ ಸಂಬಂಧ ವಿವಿಧ ಇಲಾಖೆಗಳಿಗೆ ಹಲವಾರು ನಿರ್ಣಯಗಳು ಮತ್ತು ಅಧಿಸೂಚನೆಗಳನ್ನು ಹೊರಡಿಸಲಾಗಿತ್ತು ಎಂದು ವಾದಿಸಿದರು.

ಈ ವಿಷಯದಲ್ಲಿ ಈವರೆಗಿನ ಎಲ್ಲ ನಿರ್ದೇಶಗಳು ಮತ್ತು ನಿರ್ಣಯಗಳನ್ನು ತನಗೆ ಸಲ್ಲಿಸುವಂತೆ ಸೂಚಿಸಿದ ನ್ಯಾಯಾಲಯವು ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News