ಪಠಾಣ್ ಕೋಟ್ ಗೆ ಪಾಕಿಸ್ತಾನದ ಐಎಸ್ಐಯನ್ನು ಆಹ್ವಾನಿಸಿದ ಮೋದಿ, ಶಾ ಕ್ಷಮೆ ಯಾಚಿಸಲಿ: ಕಾಂಗ್ರೆಸ್

Update: 2018-09-29 17:29 GMT

ಹೊಸದಿಲ್ಲಿ, ಸೆ.29: ಪಾಕಿಸ್ತಾನದ ಐಎಸ್‌ಐ, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಮಧ್ಯೆ ಮಹಾಮೈತ್ರಿ ಏರ್ಪಟ್ಟಿದೆ ಎಂದು ಟೀಕಿಸಿರುವ ಕಾಂಗ್ರೆಸ್, ಪ್ರಧಾನಿ ದೇಶದ ಹಿತಾಸಕ್ತಿ ಹಾಗೂ ಭದ್ರತೆಗೆ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದೆ.

ಪಠಾಣ್‌ಕೋಟ್ ವಾಯುನೆಲೆಗೆ ಭೇಟಿ ನೀಡಲು ಐಎಸ್‌ಐಗೆ ಆಹ್ವಾನ ನೀಡಿದ್ದಕ್ಕಾಗಿ ಮೋದಿ ಹಾಗೂ ಶಾ ದೇಶದ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಒತ್ತಾಯಿಸಿದ್ದಾರೆ.

 ಭಾರತದ ಪ್ರಧಾನಿ ಪಟ್ಟಕ್ಕೆ ಐಎಸ್‌ಐಯ ಅಚ್ಚುಮೆಚ್ಚಿನ ಆಯ್ಕೆ ನರೇಂದ್ರ ಮೋದಿ ಎಂದು ಐಎಸ್‌ಐ ಸಂಘಟನೆಯ ಮಾಜಿ ಮುಖ್ಯಸ್ಥ ಅಸ್ಸಾದ್ ದುರಾನಿ ಹೇಳಿರುವುದು ಮೋದಿ-ಶಾ ಜೋಡಿಗೆ ಐಎಸ್‌ಐ ಜೊತೆಗೆ ಸಂಪರ್ಕ ಇರುವುದಕ್ಕೆ ಬಲವಾದ ಪುರಾವೆಯಾಗಿದೆ ಎಂದವರು ಹೇಳಿದ್ದಾರೆ. ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿ ನಡೆಸಿದ್ದು ಐಎಸ್‌ಐ. ಆದರೂ ಐಎಸ್‌ಐ ಸದಸ್ಯರನ್ನು ಒಳಗೊಂಡ ಪಾಕಿಸ್ತಾನ ತಂಡಕ್ಕೆ ಪಠಾಣ್‌ಕೋಟ್ ವಾಯುನೆಲೆಯ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಪ್ರಧಾನಿ ಮೋದಿ ದೇಶಕ್ಕೆ ಉತ್ತರಿಸಬೇಕಿದೆ ಎಂದ ಅವರು, 2016ರ ಮಾರ್ಚ್ 30ರಂದು ಕೋಲ್ಕತಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಠಾಣ್‌ಕೋಟ್ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿ ಘಟನೆಯ ತನಿಖಾ ಪ್ರಕ್ರಿಯೆಯನ್ನು ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಿದೆ ಎಂದು ಶ್ಲಾಘಿಸಿದ್ದರು. ಶಾಗೆ ಐಎಸ್‌ಐ ಜೊತೆ ಸಂಪರ್ಕ ಇಲ್ಲದಿದ್ದರೆ ಅವರೇಕೆ ಐಎಸ್‌ಐಯನ್ನು ಶ್ಲಾಘಿಸುತ್ತಿದ್ದರು ಎಂಬ ಪ್ರಶ್ನೆಗೆ ಅವರು ಉತ್ತರಿಸಬೇಕು ಎಂದು ಸುರ್ಜೆವಾಲಾ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News