×
Ad

ಎ.ಕೆ.47 ರೈಫಲ್ಸ್ ಸಹಿತ ಅಧಿಕಾರಿ ನಾಪತ್ತೆ ಪ್ರಕರಣ: 10 ಪೊಲೀಸರ ಬಂಧನ

Update: 2018-09-29 23:15 IST

ಶ್ರೀನಗರ, ಸೆ.29: ಭಯೋತ್ಪಾದಕರ ಗುಂಪನ್ನು ಸೇರಿಕೊಳ್ಳುವ ಉದ್ದೇಶದಿಂದ ಪೊಲೀಸ್ ಇಲಾಖೆಯನ್ನು ತ್ಯಜಿಸಿ 7 ಎಕೆ 47 ರೈಫಲ್ಸ್‌ಗಳೊಂದಿಗೆ ಅಧಿಕಾರಿಯೊಬ್ಬರು ಪರಾರಿಯಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು 10 ಮಂದಿ ಪೊಲೀಸ್ ಗಾರ್ಡ್‌ಗಳನ್ನು ಬಂಧಿಸಿದ್ದಾರೆ.

ಪಿಡಿಪಿ ಶಾಸಕ ಇಜಾಝ್ ಅಹ್ಮದ್ ಮೀರ್ ಅವರ ನಿವಾಸದಲ್ಲಿ ಇತರ 10 ಮಂದಿ ಸಿಬ್ಬಂದಿಗಳೊಂದಿಗೆ ಭದ್ರತಾ ಕಾರ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸ್ ಅಧಿಕಾರಿ ಆದಿಲ್ ಬಶೀರ್ 7 ಎಕೆ ರೈಫಲ್ಸ್ ಸಹಿತ ನಾಪತ್ತೆಯಾಗಿದ್ದು, ಈತ ಭಯೋತ್ಪಾದಕರ ಗುಂಪನ್ನು ಸೇರಿಕೊಂಡಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗತ್ಯಬಿದ್ದರೆ ಶಾಸಕ ಮೀರ್‌ರನ್ನು ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

ಎಕೆ 47 ರೈಫಲ್ಸ್ ಕಳೆದುಕೊಂಡಿರುವ 7 ಪೊಲೀಸ್ ಗಾರ್ಡ್‌ಗಳನ್ನು ಬಂಧಿಸಲಾಗಿದೆ. ಅಲ್ಲದೆ ಶಾಸಕರ ನಿವಾಸದಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿತರಾಗಿದ್ದ ಪೊಲೀಸರನ್ನೂ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಹಲವು ಆಯಾಮಗಳಿವೆ ಎಂದು ಶ್ರೀನಗರದ ಹಿರಿಉ ಪೊಲೀಸ್ ಅಧೀಕ್ಷಕ ಇಮ್ತಿಯಾಝ್ ಇಸ್ಮಾಯಿಲ್ ತಿಳಿಸಿದ್ದಾರೆ.

ತಮ್ಮ ಎಕೆ 47ರೈಫಲ್ಸ್ ಕಾಣೆಯಾಗಿದೆ ಮತ್ತು ತಮ್ಮೊಂದಿಗೆ ಭದ್ರತಾ ಕಾರ್ಯದಲ್ಲಿದ್ದ ಅಧಿಕಾರಿ ಆದಿಲ್ ಬಶೀರ್ ನಾಪತ್ತೆಯಾಗಿದ್ದಾರೆ ಎಂದು ಶುಕ್ರವಾರ ಪೊಲೀಸ್ ಗಾರ್ಡ್ ದೂರು ನೀಡಿದ್ದರು. ಕಳೆದ ಎರಡು ವಾರಗಳಿಂದ ಶಾಸಕ ಮೀರ್ ಊರಿನಿಂದ ಹೊರಗಿದ್ದು ಅವರು ಎಲ್ಲಿದ್ದಾರೆಂಬ ಮಾಹಿತಿಯಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಿಲ್ ಬಶೀರ್ 7 ಎಕೆ 47 ರೈಫಲ್ ಹಾಗೂ ಒಂದು ಪಿಸ್ತೂಲನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ ಎಂದು ವರದಿಯಾಗಿದೆ. ನಾಪತ್ತೆಯಾಗಿರುವ ಅಧಿಕಾರಿಯ ಬಗ್ಗೆ ಮಾಹಿತಿ ನೀಡಿದವರಿಗೆ 2 ಲಕ್ಷ ಪುರಸ್ಕಾರ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News