×
Ad

ರಫೇಲ್ ಪಾಲುದಾರನಾಗಿ ಅಂಬಾನಿ ಕಂಪೆನಿಯ ಆಯ್ಕೆಯಲ್ಲಿ ಕೇಂದ್ರದ ಪಾತ್ರವಿಲ್ಲ: ವಿ.ಕೆ.ಸಿಂಗ್

Update: 2018-09-30 20:17 IST

ಹೊಸದಿಲ್ಲಿ, ಸೆ.30: ಫ್ರಾನ್ಸ್ ಜೊತೆಗಿನ ಎನ್‌ಡಿಎ ಸರಕಾರವು ಏರ್ಪಡಿಸಿರುವ ರಾಫೆಲ್ ಫೈಟರ್ ವಿಮಾನ ಖರೀದಿ ಒಪ್ಪಂದವನ್ನು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ.ಕೆ.ಸಿಂಗ್ ರವಿವಾರ ಸಮರ್ಥಿಸಿದ್ದಾರೆ. ಫೈಟರ್ ವಿಮಾನಗಳನ್ನು ಉತ್ಪಾದಿಸುವ ಕಂಪೆನಿಯು ತನ್ನ ಭಾರತೀಯ ಪಾಲುದಾರ ಸಂಸ್ಥೆ ಯಾರಾಗಬೇಕೆಂಬುದನ್ನು ನಿರ್ಧರಿಸುತ್ತದೆಯೇ ಹೊರತು ಇದರಲ್ಲಿ ಕೇಂದ್ರ ಸರಕಾರದ ಪಾತ್ರವಿಲ್ಲವೆಂದು ಅವರು ಹೇಳಿದ್ದಾರೆ.

ದುಬೈಯ ಭಾರತೀಯ ಕಾನ್ಸುಲೇಟ್ ಕಚೇರಿಯಲ್ಲಿ ಶನಿವಾರ ಸಂಜೆ ನಡೆದ ಭಾರತೀಯ ಸಮುದಾಯದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಫೆಲ್ ಫೈಟರ್ ವಿಮಾನಗಳನ್ನು ಉತ್ಪಾದಿಸುವ ಫ್ರಾನ್ಸ್‌ನ ಡಸಾಲ್ಟ್ ಏವಿಯೇಶನ್ ಸಂಸ್ಥೆಯು, ಸರಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು ಹೆಚ್ಚು ಉಪಯುಕ್ತವೆಂದು ಪರಿಗಣಿಸದಿರುವುದನ್ನು ದೊಡ್ಡ ವಿವಾದವನ್ನಾಗಿ ಮಾಡಕೂಡದೆಂದು ಹೇಳಿದ್ದಾರೆ.

‘‘ ಒಪ್ಪಂದದ ಉಪಪಾಲುದಾರಿಕೆ (ಅಫ್‌ಸೆಟ್)ಯನ್ನು ಯಾರಿಗೆ ನೀಡ ಬೇಕೆಂಬುದನ್ನು ಉಪಕರಣವನ್ನು ಉತ್ಪಾದಿಸುವ ಕಂಪೆನಿಯು ನಿರ್ಧರಿಸುತ್ತದೆ. ಹೀಗಾಗಿ ಅನಿಲ್ ಅಂಬಾನಿಯ ಕಂಪೆನಿಯನ್ನು ಉಪಪಾಲುದಾರ ಸಂಸ್ಥೆಯಾಗಿ ಆಯ್ಕೆ ಮಾಡಿರುವುದು ಡಸ್ಸಾಲ್ಟ್‌ನ ನಿರ್ಧಾರವಾಗಿದೆ. ವಿವಿಧ ಉಪಕರಣಗಳ ತಯಾರಿಕೆಗೆ ಡಸಾಲ್ಟ್ , ಹಲವಾರು ಕಂಪೆನಿಗಳನ್ನು ಆಯ್ಕೆ ಮಾಡಿದೆ. ಅನಿಲ್ ಅಂಬಾನಿಯ ಕಂಪೆನಿ ಅವುಗಳಲ್ಲೊಂದಾಗಿದೆ’’ ಎಂದು ಅವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ 2015ರ ಎಪ್ರಿಲ್ 10ನಲ್ಲಿ ಆಗಿನ ಫ್ರಾನ್ಸ್ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಜೊತೆ ನಡೆಸಿದ ಮಾತುಕತೆ ನಡೆಸಿದ ಬಳಿಕ 36 ರಾಫೆಲ್ ಫೈಟರ್ ಜೆಟ್ ವಿಮಾನಗಳ ಮೊದಲ ತಂಡವನ್ನು ಖರೀದಿಸುವುದಾಗಿ ಘೋಷಿಸಿದ್ದರು. 2016,ಆಗಸ್ಟ್ 23ರಂದು ಒಪ್ಪಂದವು ಅಂತಿಮಗೊಂಡಿತ್ತು.

58 ಸಾವಿರ ಕೋಟಿ ರೂ. ಮೌಲ್ಯದ ರಾಫೆಲ್ ಒಪ್ಪಂದಕ್ಕೆ ಸಂಬಂಧಿಸಿ ಫ್ರಾನ್ಸ್‌ನ ಡಸಾಲ್ಟ್ ಕಂಪೆನಿಯ ಭಾರತೀಯ ಪಾಲುದಾರನನ್ನಾಗಿ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್ ಕಂಪೆನಿಯ ಹೆಸರನ್ನು ಮೋದಿ ಸರಕಾರ ಪ್ರಸ್ತಾಪಿಸಿತ್ತು ಹಾಗೂ ಈ ವಿಷಯದಲ್ಲಿ ಫ್ರಾನ್ಸ್‌ಗೆ ಬೇರೆ ಆಯ್ಕೆಗೆ ಅವಕಾಶವಿರಲಿಲ್ಲವೆಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷರಾದ ಫ್ರಾಂಸ್ವಾ ಒಲಾಂಡ್ ಹೇಳಿರುವುದಾಗಿ ಫ್ರಾನ್ಸ್ ಮಾಧ್ಯಮವೊಂದು ಎರಡು ವಾರಗಳ ಹಿಂದೆ ವರದಿ ಮಾಡಿದ ಬಳಿಕ ವಿವಾದ ಭುಗಿಲೆದ್ದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News