×
Ad

ಶಬರಿಮಲೆ: ತೀರ್ಪು ಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ

Update: 2018-09-30 20:43 IST

 ತಿರುವನಂತಪುರಂ, ಸೆ.30: ಎಲ್ಲಾ ವಯಸ್ಸಿನ ಮಹಿಳೆಯರೂ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅವಕಾಶ ಮಾಡಿಕೊಡುವ ಸುಪ್ರೀಂಕೋರ್ಟ್‌ನ ನ್ಯಾಯಪೀಠದ ತೀರ್ಪನ್ನು ಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಉದ್ದೇಶಿಸಲಾಗಿದ್ದು ಅಕ್ಟೋಬರ್ 3ರಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಟ್ರಾವಂಕೋರ್ ದೇವಸ್ಯಂ ಬೋರ್ಡ್(ಟಿಡಿಬಿ) ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ.

ನ್ಯಾಯಾಲಯದ ತೀರ್ಪಿನಿಂದ ನಿರಾಶೆಯಾಗಿದೆ. ಆದರೆ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಆದರೆ ತೀರ್ಪಿನ ಪುನರ್ವಿಮರ್ಶೆ ಕೋರಿ ಅರ್ಜಿ ಸಲ್ಲಿಸುವ ಬಗ್ಗೆ ಅ.3ರ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದವರು ತಿಳಿಸಿದ್ದಾರೆ. 10ರಿಂದ 50 ವರ್ಷದ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸುವ ಕ್ರಮವನ್ನು ಬೆಂಬಲಿಸಿರುವ ಅಯ್ಯಪ್ಪ ಧರ್ಮಸೇನೆಯ ಅಧ್ಯಕ್ಷ ರಾಹುಲ್ ಈಶ್ವರ್ ಅವರೂ ಪರಿಶೀಲನಾ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಖಂಡಿತವಾಗಿಯೂ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸುತ್ತೇವೆ. ದೇವಸ್ಥಾನದ ಮೇಲೆ ಭಕ್ತರು ಇರಿಸಿರುವ ನಂಬಿಕೆಯ ಮೂಲ ಹಾಗೂ ದೇವಸ್ಥಾನದ ವ್ಯವಸ್ಥೆಯ ಮೇಲೆ ಇದು ಪರಿಣಾಮ ಬೀರಿದೆ. ಅಕ್ಟೋಬರ್ 16ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಿರುವ ಕಾರಣ ನಮಗೆ ಕಾನೂನು ಹೋರಾಟಕ್ಕೆ ಸಾಕಷ್ಟು ಕಾಲಾವಕಾಶ ಇದೆ ಎಂದು ಈಶ್ವರ್ ಹೇಳಿದ್ದಾರೆ.

 ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ

  ಸುಪ್ರೀಂಕೋರ್ಟ್‌ನ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯ ಬಗ್ಗೆ ತಿಳಿಸಿರುವ ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್, ಅದೇನಿದ್ದರೂ ಈಗ ಶಬರಿಮಲೆ ದೇವಸ್ಥಾನ ದ ಕಟ್ಟಡದಲ್ಲಿ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆಯನ್ನು ಮೊದಲು ಮಾಡಲಾಗುವುದು ಎಂದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕೇರಳ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಿದ್ದು, ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆಯನ್ನು ನೀಳಕ್ಕಲ್‌ನಲ್ಲಿ ಮಾಡಲಾಗುವುದು. ಶಬರಿಮಲೆ ಯಾತ್ರೆಯ ಅವಧಿ ಶೀಘ್ರದಲ್ಲೇ ಆರಂಭವಾಗುವುದರಿಂದ ವಿಸ್ತೃತ ವ್ಯವಸ್ಥೆ ಮಾಡಲು ಈಗ ಸಾಧ್ಯವಿಲ್ಲ ಎಂದವರು ತಿಳಿಸಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ತೆರಳುವ ಮಂಡಲಂ- ಮಕರವಿಳಕ್ಕು ಯಾತ್ರೆಯ 6.5 ಕಿ.ಮೀ. ಉದ್ದದ ದಾರಿಯ ಮೂಲ ಶಿಬಿರ ನೀಳಕ್ಕಲ್‌ನಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News