×
Ad

ಐಎಲ್‌ಎಫ್‌ಎಸ್ ನ 90 ಸಾವಿರ ಕೋಟಿ ರೂ. ಸಾಲ ತೀರಿಸಲು ಸರಕಾರದಿಂದ ಸಾರ್ವಜನಿಕರ ಹಣ ಬಳಕೆ: ರಾಹುಲ್

Update: 2018-09-30 21:01 IST

ಹೊಸದಿಲ್ಲಿ, ಸೆ.30: ಸಾಲದ ಹೊರೆಯಿಂದ ತತ್ತರಿಸಿದ್ದ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫೈನಾನ್ಸ್ ಸರ್ವಿಸಸ್(ಐಎಲ್‌ಎಫ್‌ಎಸ್) ಸಂಸ್ಥೆಯ 90,000 ಕೋಟಿ ರೂ. ಸಾಲವನ್ನು ತೀರಿಸಲು ಸಾರ್ವಜನಿಕರ ಹಣವನ್ನು ಸರಕಾರ ಬಳಸಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಎಸ್‌ಬಿಐ ಹಾಗೂ ಎಲ್‌ಐಸಿ ಸಂಸ್ಥೆಗಳಲ್ಲಿ ಇರುವ ಸಾರ್ವಜನಿಕರ ಹಣವನ್ನು ಮೋದಿ ಸೂಚನೆ ಮೇರೆಗೆ ಬಳಸಿಕೊಂಡು ಐಎಲ್‌ಎಫ್‌ಎಸ್‌ನ ಸಾಲ ತೀರಿಸಲಾಗಿದೆ ಎಂದು ‘ಲೈಟ್ಸ್, ಕ್ಯಾಮೆರಾ, ಸ್ಕಾಮ್’ ಎಂಬ ತಲೆಬರಹದ ಟ್ವೀಟ್‌ನಲ್ಲಿ ರಾಹುಲ್ ಹೇಳಿದ್ದಾರೆ. ಐಎಲ್‌ಎಫ್‌ಎಸ್ ಎಂದರೆ ‘ಐ ಲವ್ ಫೈನಾನ್ಶಿಯಲ್ ಸ್ಕಾಮ್ಸ್’ ಎಂದಾಗಿದೆ ಎಂದು ರಾಹುಲ್ ವಿಶ್ಲೇಷಿಸಿದ್ದಾರೆ.

ಐಎಲ್‌ಎಫ್‌ಎಸ್ ದೇಶದಾದ್ಯಂತ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಹಣಕಾಸಿನ ನೆರವು ನೀಡುವ ಸಂಸ್ಥೆಯಾಗಿದೆ. 2007ರಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಐಎಲ್‌ಎಫ್‌ಎಸ್‌ಗೆ ‘ಗಿಫ್ಟ್ ಸಿಟಿ’ ಯೋಜನೆಯಡಿ 70,000 ಕೋಟಿ ರೂ. ಮೊತ್ತದ ಯೋಜನೆಯನ್ನು ನೀಡಲಾಗಿತ್ತು. ಆದರೆ ಈ ಯೋಜನೆಯಡಿ ಇದುವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ರಾಹುಲ್ ಹೇಳಿದ್ದಾರೆ. 2018ರಲ್ಲಿ ಇದೇ ಸಂಸ್ಥೆಗೆ ಮೋದಿ ಎಲ್‌ಐಸಿ ಹಾಗೂ ಎಸ್‌ಬಿಐಯ ಹಣ ಬಳಸಿ ಮತ್ತೆ ನೆರವಾಗಿದ್ದಾರೆ. ದೇಶದ ಜನತೆ ಎಲ್‌ಐಸಿ ಮೇಲೆ ಭರವಸೆ ಇಟ್ಟಿದ್ದಾರೆ. ತಮ್ಮ ಪೈಸೆಪೈಸೆಯನ್ನೂ ಕೂಡಿಸಿ ಎಲ್‌ಐಸಿ ಪಾಲಿಸಿ ಖರೀದಿಸುತ್ತಾರೆ. ವಂಚಕ ಸಂಸ್ಥೆಗಳನ್ನು ಉಳಿಸಲು ಜನತೆಯ ಹಣ ಯಾಕೆ ಬಳಸಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News