ಚೀನಾ ಭಾಗದಲ್ಲಿ ಉತ್ತಮ ಅಭಿವೃದ್ಧಿ, ಭಾರತದ ಭಾಗದಲ್ಲಿ ರಸ್ತೆಯೇ ಇಲ್ಲ

Update: 2018-09-30 15:33 GMT
ಸಾಂದರ್ಭಿಕ ಚಿತ್ರ

ಪಿತೋಡಗಢ(ಉತ್ತರಾಖಂಡ್),ಸೆ.30: ಲಿಪುಲೇಖ್ ಪಾಸ್‌ನಿಂದಾಚೆ ಭಾರತ-ಚೀನಾ ಗಡಿಯ ಟಿಬೆಟ್ ಪಾರ್ಶ್ವದಲ್ಲಿ ಚೀನಾ ಭರದಿಂದ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿರುವುದು ತಮ್ಮನ್ನು ಪ್ರಭಾವಿತಗೊಳಿಸಿದೆ. ಆದರೆ ಭಾರತದ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಿರಾಶಾದಾಯಕ ನಿಧಾನಗತಿಯಲ್ಲಿ ನಡೆಯುತ್ತಿವೆ ಎಂದು ಕೈಲಾಸ ಮಾನಸ ಸರೋವರ ಯಾತ್ರೆಯಿಂದ ಮರಳಿರುವ ಯಾತ್ರಿಕರು ತಿಳಿಸಿದ್ದಾರೆ.

ಭಾರತದ ರಸ್ತೆಗಳು ಪಾಸ್‌ನಿಂದ ಇನ್ನೂ 75 ಕಿ.ಮೀ.ದೂರದಲ್ಲಿಯೇ ಇವೆ,ಆದರೆ ಚೀನಾ ಸುಮಾರು 500 ಮೀ.ಗಳಷ್ಟು ಹತ್ತಿರದವರೆಗೂ ಉತ್ತಮ ರಸ್ತೆಯನ್ನು ನಿರ್ಮಿಸಿದೆ ಎಂದು ನೈನಿತಾಲ್ ಜಿಲ್ಲೆಯ ನಿವಾಸಿಯಾಗಿರುವ ಯಾತ್ರಿ ಸುಧೀರ ವರ್ಮಾ ತಿಳಿಸಿದರು. ಭಾರತ-ಚೀನಾ ಗಡಿಯಲ್ಲಿಯ ಕೊನೆಯ ಭಾರತೀಯ ಗಡಿ ಠಾಣೆಯನ್ನು ಸಂಪರ್ಕಿಸಲು ನಿರ್ಮಾಣಗೊಳ್ಳುತ್ತಿರುವ ಮೂರು ವಾಹನ ಸಂಚಾರಯೋಗ್ಯ ರಸ್ತೆಗಳ ಕಾಮಗಾರಿ ನಿರಾಶಾದಾಯಕವೆನ್ನುವಷ್ಟು ಆಮೆಗತಿಯಲ್ಲಿ ಸಾಗುತ್ತಿದೆ ಎಂದರು.

 ಧರ್ಚುಲಾ ಉಪವಿಭಾಗಾಧಿಕಾರಿ ಆರ್.ಕೆ.ಪಾಂಡೆ ಅವರು ತಿಳಿಸಿರುವಂತೆ ಪಿಥೋಡಗಡದ ದರ್ಮಾ ಕಣಿವೆಯಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಭಾರಿ ಬಂಡೆಗಲ್ಲುಗಳಿಂದಾಗಿ ಅಡ್ಡಿಯುಂಟಾಗಿದೆ. ಇನ್ನೊಂದು ರಸ್ತೆಯ ಕಾಮಗಾರಿ ಕಳೆದೊಂದು ವರ್ಷದಿಂದ ಆಮೆಗತಿಯಲ್ಲಿ ಸಾಗುತ್ತಿದೆ. ಮುನ್ಸಿಯಾರಿ ಉಪವಿಭಾಗ ವ್ಯಾಪ್ತಿಯ ಜೋಹಾರ ಕಣಿವೆಯಲ್ಲಿ ಭಾರತದ ಕೊನೆಯ ಗಡಿ ಠಾಣೆಯನ್ನು ಸಂಪರ್ಕಿಸುವ 61 ಕಿ.ಮೀ.ಗಳ ಉದ್ದದ ರಸ್ತೆಯ ಪೈಕಿ ಕೇವಲ 18 ಕಿ.ಮೀ.ರಸ್ತೆ ಕಳೆದ 10 ವರ್ಷಗಳಲ್ಲಿ ಪೂರ್ಣಗೊಂಡಿದೆ.

ರಸ್ತೆ ನಿರ್ಮಾಣ 2008ರಲ್ಲಿ ಆರಂಭಗೊಂಡಿದ್ದು,2012ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಈವರೆಗೆ ಕೇವಲ 18 ಕಿ.ಮೀ.ರಸ್ತೆ ನಿರ್ಮಾಣಗೊಂಡಿದೆ ಎಂದು ಮುನ್ಸಿಯಾರಿ ಉಪವಿಭಾಗಾಧಿಕಾರಿ ಕೆ,ಎನ್.ಗೋಸ್ವಾಮಿ ತಿಳಿಸಿದರು.

ಚೀನಾ ಭರದಿಂದ ಕಾಮಗಾರಿಗಳನ್ನು ನಡೆಸುತ್ತಿದ್ದು,ಈ ವರ್ಷದ ಅಂತ್ಯದೊಳಗೆ ಅದು ಗಡಿ ಠಾಣೆಯವರೆಗೆ ರಸ್ತೆಯನ್ನು ಪೂರ್ಣಗೊಳಿಸಲಿದೆ ಎಂದು ವರ್ಮಾ ಹೇಳಿದರು.

ಚಿನಾ ಲಿಪುಲೇಖ್ ಪಾಸ್ ಮಾರ್ಗದಲ್ಲಿ ಟಕ್ಲಾಕೋಟ್‌ವರೆಗೆ ಚತುಷ್ಪಥ ರಸ್ತೆಯನ್ನು ನಿರ್ಮಿಸಿದೆ,ಆದರೆ ನಾವಿನ್ನೂ ನಮ್ಮ ಚಾರಣ ಮಾರ್ಗವನ್ನೂ ದುರಸ್ತಿ ಮಾಡಿಲ್ಲ ಎಂದು ಇನ್ನೋರ್ವ ಯಾತ್ರಿ ಧಮೇಂದ್ರ ಉಪಾಧ್ಯಾಯ ಹೆಳಿದರು.

ವ್ಯಾಸ ಕಣಿವೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಸ್ತೆ 2020ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಗಡಿ ರಸ್ತೆಗಳ ಸಂಸ್ಥೆಯು ಭರವಸೆ ನೀಡಿದೆ ಎಂದು ಪಿಥೋಡಗಡ್ ಜಿಲ್ಲಾಧಿಕಾರಿ ಸಿ.ರವಿಶಂಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News