ಮತದಾನದ 48 ಗಂಟೆ ಮೊದಲು ಗೂಗಲ್, ಫೇಸ್‌ಬುಕ್, ಟ್ವಿಟರ್‌ನಲ್ಲಿ ಚುನಾವಣೆ ಪ್ರಚಾರವಿಲ್ಲ: ರಾವತ್

Update: 2018-09-30 15:37 GMT

ಹೊಸದಿಲ್ಲಿ, ಸೆ.30: ಮತದಾನದ ಪಾವಿತ್ರ್ಯತೆಗೆ ಧಕ್ಕೆಯಾಗುವ ಯಾವುದೇ ಪ್ರಕ್ರಿಯೆಗೆ ತಮ್ಮ ವೇದಿಕೆಯನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಸಾಮಾಜಿಕ ಮಾಧ್ಯಮದ ಪ್ರಮುಖರಾದ ಟ್ವಿಟರ್, ಫೇಸ್‌ಬುಕ್, ಇಂಟರ್‌ನೆಟ್‌ನ ಪ್ರಮುಖ ಗೂಗಲ್ ಸಂಸ್ಥೆ ಭರವಸೆ ನೀಡಿದೆ ಎಂದು ಮುಖ್ಯ ಚುನಾವಣಾಧಿಕಾರಿ ಒ.ಪಿ.ರಾವತ್ ತಿಳಿಸಿದ್ದಾರೆ.

   ಹಿರಿಯ ಪ್ರಾದೇಶಿಕ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ನೇತೃತ್ವದ ಸಮಿತಿಯು ಈ ಮೂರೂ ಸಂಸ್ಥೆಗಳ ಸ್ಥಳೀಯ ಮುಖ್ಯಸ್ಥರೊಂದಿಗೆ ಇತ್ತೀಚೆಗೆ ನಡೆಸಿದ್ದ ಸಭೆಯಲ್ಲಿ ಈ ಭರವಸೆ ದೊರೆತಿದೆ. ಮತದಾನದ 48 ಗಂಟೆ ಮೊದಲು ತಮ್ಮ ವೇದಿಕೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವುದೇ ವಿಷಯವನ್ನು ಪ್ರಸಾರ ಮಾಡಲು ಬಿಡುವುದಿಲ್ಲ ಎಂದು ತಿಳಿಸಿರುವುದಾಗಿ ರಾವತ್ ಹೇಳಿದ್ದಾರೆ.

ಈ 48 ಗಂಟೆಗಳ ಅವಧಿಯನ್ನು ವೌನ ಅವಧಿ ಎಂದು ಕರೆಯಲಾಗುವುದು. ಈ ಅವಧಿಯಲ್ಲಿ ತಾವು ಯಾರಿಗೆ ಮತ ಚಲಾಯಿಸಬೇಕೆಂಬುದನ್ನು ಮತದಾರರು ಶಾಂತಚಿತ್ತರಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ. ಅಲ್ಲದೆ ರಾಜಕೀಯ ಜಾಹೀರಾತು ಪ್ರಸಾರ ಮಾಡುವಾಗ ಅದಕ್ಕೆ ಪಾವತಿಸಿರುವ ಮೊತ್ತದ ವಿವರವನ್ನೂ ನಮೂದಿಸುವುದಾಗಿ ಮೂರೂ ಸಂಸ್ಥೆಗಳು ತಿಳಿಸಿವೆ. ಇದರಿಂದ ಪ್ರಚಾರದ ಸಂದರ್ಭ ನಡೆಸಿದ್ದ ವೆಚ್ಚಕ್ಕೆ ಈ ಮೊತ್ತವನ್ನೂ ಸೇರಿಸಲು ಅನುಕೂಲವಾಗುತ್ತದೆ ಎಂದು ರಾವತ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News