ಕಾಶ್ಮೀರ: 2016ರ ಬಳಿಕ ಪಾಕ್ ಗುಂಡಿನ ದಾಳಿಗೆ 109 ಮಂದಿ ಬಲಿ

Update: 2018-09-30 16:13 GMT

ಶ್ರೀನಗರ, ಸೆ.30: ಜಮ್ಮು ಕಾಶ್ಮೀರದಲ್ಲಿ ಗಡಿ ಉಲ್ಲಂಘಿಸಿ ಪಾಕ್ ಸೇನೆ ನಡೆಸುತ್ತಿರುವ ಗುಂಡಿನ ದಾಳಿಗೆ 2016ರ ಜನವರಿಯಿಂದ 2018ರವರೆಗಿನ ಜುಲೈವರೆಗಿನ ಅವಧಿಯಲ್ಲಿ 109 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಜಮ್ಮು ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ರಮಣ್ ಶರ್ಮ ಆರ್‌ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾಹಿತಿಯಲ್ಲಿ ಈ ವಿವರವಿದೆ. ಈ ವರ್ಷದ ಜುಲೈವರೆಗೆ ಪಾಕಿಸ್ತಾನದಿಂದ 1,435 ಗಡಿ ಉಲ್ಲಂಘನೆ ಪ್ರಕರಣ ನಡೆದಿದ್ದರೆ ಕಳೆದ ವರ್ಷ 971, 2016ರಲ್ಲಿ 449 ಪ್ರಕರಣ ನಡೆದಿದೆ. 2016ರ ಸೆ.29ರಂದು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಯ ಮೇಲೆ ನಡೆಸಿದ್ದ ಸರ್ಜಿಕಲ್ ದಾಳಿ ಘಟನೆಯ ಬಳಿಕ ಪಾಕ್‌ನಿಂದ ಗಡಿ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವ ಪ್ರಕರಣ ಹೆಚ್ಚಿರುವುದು ಇದರಿಂದ ಸ್ಪಷ್ಟವಾಗಿದೆ. 2016ರಿಂದ 2018ರ ಜುಲೈವರೆಗೆ 35 ಸೇನಾ ಯೋಧರು ಹಾಗೂ 21 ಬಿಎಸ್‌ಎಫ್ ಯೋಧರು, 28 ನಾಗರಿಕರು ಸಾವನ್ನಪ್ಪಿದ್ದಾರೆ. 2016ರಲ್ಲಿ ಹತರಾದ ನಾಗರಿಕರ ಸಂಖ್ಯೆ 13, 2017ರಲ್ಲಿ 12 ಆಗಿದೆ. 2016ರಿಂದ ಈ ವರ್ಷದ ಜುಲೈವರೆಗೆ 263 ಭದ್ರತಾ ಸಿಬ್ಬಂದಿ, 302 ನಾಗರಿಕರು ಪಾಕ್ ಪಡೆಗಳ ಗುಂಡಿನ ದಾಳಿಯಿಂದ ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News