ಪೇಶಾವರ ಶಾಲೆಯ ಮೇಲಿನ ದಾಳಿಯಲ್ಲಿ ಭಾರತದ ಕೈವಾಡ ಎಂದ ಪಾಕ್

Update: 2018-09-30 15:56 GMT

ನ್ಯೂಯಾರ್ಕ್, ಸೆ. 30: 2014ರಲ್ಲಿ ಪೇಶಾವರದ ಸೇನಾ ಶಾಲೆಯೊಂದರಲ್ಲಿ ನಡೆದ ಮಕ್ಕಳ ಹತ್ಯಾಕಾಂಡದಲ್ಲಿ ಭಾರತದ ಕೈವಾಡವಿದೆ ಎಂಬುದಾಗಿ ಶನಿವಾರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಮಾಡಿದ ಭಾಷಣದಲ್ಲಿ ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹ್ಮೂದ್ ಕುರೇಶಿ ಮಾಡಿರುವ ಆರೋಪವು ‘ಅಸಹ್ಯಕರ’ ಹಾಗೂ ‘ಅಸಂಬದ್ಧ’ವಾಗಿದೆ ಎಂದು ಭಾರತ ಹೇಳಿದೆ.

ಕುರೇಶಿಯ ಆರೋಪಗಳನ್ನು ತಿರಸ್ಕರಿಸಿದ ವಿಶ್ವಸಂಸ್ಥೆಯಲ್ಲಿನ ಭಾರತೀಯ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಈನಮ್ ಗಂಭೀರ್, ಭಯೋತ್ಪಾದಕರೆಂದು ವಿಶ್ವಸಂಸ್ಥೆ ಘೋಷಿಸಿದವರ ಪೈಕಿ 132 ಮಂದಿಗೆ ಪಾಕಿಸ್ತಾನ ‘ಆತಿಥ್ಯ ಮತ್ತು ಆಶ್ರಯ’ ನೀಡುತ್ತಿದೆ ಎಂದು ಆರೋಪಿಸಿದರು ಹಾಗೂ ಪಾಕಿಸ್ತಾನದ ಸಚಿವರು ಹಿಂದಿನ ಶೈಲಿಯಲ್ಲೇ ಭಾಷಣ ಮಾಡುತ್ತಿದ್ದಾರೆ ಎಂದರು.

ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಭಾಷಣ ಮಾಡಿದ ತುಂಬಾ ಹೊತ್ತಿನ ಬಳಿಕ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಕುರೇಶಿ, ‘ಕ್ಷುಲ್ಲಕ’ ಕಾರಣಗಳನ್ನು ಉಲ್ಲೇಖಿಸಿ ಭಾರತ ಶಾಂತಿ ಪ್ರಕ್ರಿಯೆಗೆ ತಡೆ ಒಡ್ಡಿದೆ, ಪಾಕಿಸ್ತಾನ ಮತ್ತು ವಲಯದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸುತ್ತಿದೆ, ‘ಸಾರ್ಕ್’ ಸಂಘಟನೆಯನ್ನು ಪರಿಣಾಮರಹಿತವಾಗಿಸಿದೆ ಮತ್ತು ಕಾಶ್ಮೀರದಲ್ಲಿ ಮಾನವಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.

‘‘ಪೇಶಾವರದ ಶಾಲೆಯೊಂದರಲ್ಲಿ ನಡೆದ 150ಕ್ಕೂ ಅಧಿಕ ಮಕ್ಕಳ ಮಾರಣಹೋಮ, ಭೀಕರ ಮಾಸ್ಟುಂಗ್ ಆಕ್ರಮಣ ಮತ್ತು ಭಾರತದ ಬೆಂಬಲ ಹೊಂದಿದ ಭಯೋತ್ಪಾದಕರು ನಡೆಸಿದ ಇತರ ಹಲವಾರು ಭಯೋತ್ಪಾದಕ ದಾಳಿಗಳನ್ನು ಪಾಕಿಸ್ತಾನ ಎಂದೂ ಮರೆಯದು’’ ಎಂದು ಕುರೇಶಿ ಹೇಳಿದರು.

ಭಯೋತ್ಪಾದಕರ ವಿರುದ್ಧ ಕ್ರಮ ತೆಗೆದುಕೊಳ್ಳುವಲ್ಲಿನ ಅದರ ವೈಫಲ್ಯತೆಯನ್ನು ಮುಚ್ಚಿಹಾಕುವ ನಿಟ್ಟಿನಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕ್ ಸಚಿವರು ಇಂಥ ಆರೋಪಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

‘‘ಭಾರತ ಅದರ ಎಲ್ಲ ನೆರೆ ದೇಶಗಳ ವಿರುದ್ಧ ಭಯೋತ್ಪಾದನೆಯನ್ನು ಪ್ರಾಯೋಜಿಸಿದೆ ಹಾಗೂ ಆಕ್ರಮಣಕಾರಿಯಾಗಿ ವರ್ತಿಸಿದೆ’’ ಎಂಬುದಾಗಿಯೂ ಅವರು ಆರೋಪಿಸಿದರು.

ಭಾರತದ ಶಾಲೆಗಳು ಶ್ರದ್ಧಾಂಜಲಿ ಸಲ್ಲಿಸಿದ್ದವು

ಶನಿವಾರ ವಿಶ್ವಸಂಸ್ಥೆಯ ದಿನದ ಅಧಿವೇಶನ ಮುಗಿಯುವ ಮುನ್ನ ಉತ್ತರಿಸುವ ಹಕ್ಕನ್ನು ಚಲಾಯಿಸಿದ ಭಾರತ, ಪಾಕಿಸ್ತಾನದ ವಿರುದ್ಧ ಆರೋಪಗಳ ಸುರಿಮಳೆಗೈದಿತು.

 ‘‘ಪಾಕಿಸ್ತಾನದ ನೂತನ ವಿದೇಶ ಸಚಿವರ ಮಾತುಗಳನ್ನು ಗಮನವಿಟ್ಟು ಕೇಳುವುದಕ್ಕಾಗಿ ನನ್ನ ನಿಯೋಗ ಇಂದು ಬೆಳಿಗ್ಗೆ ಈ ಗೌರವಾನ್ವಿತ ಸಭೆಗೆ ಬಂದಿತು. ಅವರು ‘ನೂತನ ಪಾಕಿಸ್ತಾನ’ದ ಮುನ್ನೋಟವನ್ನು ಮುಂದಿಡುತ್ತಾರೆ ಎಂದು ನಾವು ಭಾವಿಸಿದ್ದೆವು’’ ಎಂದು ಗಂಭೀರ್ ಹೇಳಿದರು.

‘‘ಆದರೆ, ನಾವು ಕೇಳಿದ್ದು ಹಳೆಯ ಪಾಕಿಸ್ತಾನದ ಅಚ್ಚಿನಲ್ಲಿದ್ದ ಹೊಸ ಪಾಕಿಸ್ತಾನ ಮಾತನಾಡುವುದನ್ನು’’ ಎಂದರು.

 ‘‘ಪಾಕಿಸ್ತಾನದ ವಿದೇಶ ಸಚಿವರು ಅವರ ಭಾಷಣದಲ್ಲಿ ಹಲವಾರು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಅವುಗಳ ಪೈಕಿ ಒಂದು ಪೇಶಾವರದ ಮಕ್ಕಳ ಶಾಲೆಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದ್ದು. ಆ ದಾಳಿ ನಡೆದಾಗ ಭಾರತದಲ್ಲಿ ದುಃಖ ಮತ್ತು ನೋವು ಉಮ್ಮಳಿಸಿತ್ತು. ಸಂಸತ್ತಿನ ಉಭಯ ಸದನಗಳು ಅದನ್ನು ಖಂಡಿಸಿದ್ದವು. ಭಾರತದಾದ್ಯಂತದ ಶಾಲೆಗಳು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಕ್ಕಳಿಗಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದವು’’ ಎಂದು ಈನಮ್ ಗಂಭೀರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News