ಆರೆಸ್ಸೆಸ್, ಆದಿತ್ಯನಾಥ್‌ರನ್ನು ಉಲ್ಲೇಖಿಸಿ ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪಾಕ್ ವಾಗ್ದಾಳಿ

Update: 2018-09-30 17:07 GMT

ವಿಶ್ವಸಂಸ್ಥೆ, ಸೆ. 30: ಗಡಿಯಾಚೆಯ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲದ ವಿಚಾರದಲ್ಲಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಒಂದು ದಿನದ ಬಳಿಕ, ರವಿವಾರ ಪಾಕಿಸ್ತಾನ ಆರೆಸ್ಸೆಸ್ ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಟೀಕಾಪ್ರಹಾರಗೈದಿದೆ.

‘‘ಇಂದಿನ ಸಂಕುಚಿತ ಭಾರತದಲ್ಲಿ ಭಿನ್ನಮತಕ್ಕೆ ಅವಕಾಶವಿಲ್ಲ’’ ಎಂದು ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಸಾದ್ ವರಾಯಿಚ್ ಆರೋಪಿಸಿದರು. ಪಾಕಿಸ್ತಾನದ ಉತ್ತರಿಸುವ ಹಕ್ಕನ್ನು ಚಲಾಯಿಸಿದ ವರಾಯಿಚ್, ಬಿಜೆಪಿಯ ಸೈದ್ಧಾಂತಿಕ ಗುರು ಆರೆಸ್ಸೆಸ್ ತನ್ನ ಶಾಖೆಗಳ ಮೂಲಕ ಫ್ಯಾಶಿಸಂ ಹರಡುತ್ತಿದೆ ಎಂದು ಹೇಳಿದರು.

‘‘ಆರೆಸ್ಸೆಸ್ನ ಫ್ಯಾಶಿಸಂ ಕೇಂದ್ರಗಳು ನಮ್ಮ ವಲಯದಲ್ಲಿನ ಭಯೋತ್ಪಾದನೆ ಉತ್ಪಾದಕ ನೆಲವಾಗಿದೆ. ಧಾರ್ಮಿಕ ಶ್ರೇಷ್ಠತೆಯ ವಿಚಾರಗಳನ್ನು ಸರಕಾರದ ನೇರ ಶಾಮೀಲಾತಿಯೊಂದಿಗೆ ಭಾರತದಾದ್ಯಂತ ಹರಡಲಾಗುತ್ತಿದೆ’’ ಎಂದು ಪಾಕಿಸ್ತಾನಿ ಪ್ರತಿನಿಧಿ ಹೇಳಿದರು.

ಅತ್ಯಂತ ದೊಡ್ಡ ರಾಜ್ಯದ ನಾಯಕ ಹಿಂದೂ ಉಗ್ರವಾದಿ

ಭಾರತದ ಅತ್ಯಂತ ದೊಡ್ಡ ರಾಜ್ಯ ಉತ್ತರಪ್ರದೇಶದ ನಾಯಕ ಓರ್ವ ಹಿಂದೂ ಉಗ್ರವಾದಿ; ಅವರು ಹಿಂದೂಗಳ ಧಾರ್ಮಿಕ ಶ್ರೇಷ್ಠತೆಯನ್ನು ಬಹಿರಂಗವಾಗಿ ಸಾರುತ್ತಿದ್ದಾರೆ ಎಂದರು.

‘‘ಕ್ರೈಸ್ತರು ಮತ್ತು ಮುಸ್ಲಿಮರು ಸೇರಿದಂತೆ ಭಾರತದ ಅಲ್ಪಸಂಖ್ಯಾತರನ್ನು ಹಿಂದೂ ಶ್ರೇಷ್ಠತಾವಾದಿಗಳು ಸಾರ್ವಜನಿಕವಾಗಿ ಹೊಡೆದು ಕೊಲ್ಲುತ್ತಿದ್ದಾರೆ. ಹಿಂದೂ ತೀವ್ರವಾದಿ ಆದಿತ್ಯನಾಥ್ ಅಲ್ಲಿನ ಅತ್ಯಂತ ದೊಡ್ಡ ರಾಜ್ಯ ಉತ್ತರಪ್ರದೇಶದ ನಾಯಕರಾಗಿದ್ದಾರೆ. ಅವರು ಹಿಂದೂ ಶ್ರೇಷ್ಠತಾವಾದವನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ’’ ಎಂದು ವರಾಯಿಚ್ ಹೇಳಿದರು.

‘‘ಅಸ್ಸಾಮ್‌ನಲ್ಲಿರುವ ಹಲವು ಬಂಗಾಳಿಗಳು ದಿಢೀರನೆ ಪೌರತ್ವ ಕಳೆದುಕೊಂಡರು ಹಾಗೂ ಭಾರತದ ಪ್ರಮುಖ ನಾಯಕರೊಬ್ಬರು ಅವರನ್ನು ಗೆದ್ದಲುಗಳು ಎಂದು ಕರೆದರು’’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾರ ಹೆಸರು ಉಲ್ಲೇಖಿಸದೆ ಹೇಳಿದರು.

‘‘ಅಸ್ಸಾಮ್‌ನ ಬಂಗಾಳಿಗಳ ಪೌರತ್ವದ ಹಕ್ಕನ್ನು ಮನಬಂದಂತೆ ಹಿಂದೆ ಪಡೆದ ಹಾಗೂ ಅವರನ್ನು ದಿಢೀರನೆ ದೇಶವಿಲ್ಲದವರಂತೆ ಮಾಡಿದ ಹಾಗೂ ಅವರನ್ನು ‘ಗೆದ್ದಲುಗಳು’ ಎಂದು ಕರೆದ ನಾಯಕನನ್ನು ಹೊಂದಿದ ಹಾಗೂ ಚರ್ಚ್‌ಗಳು ಮತ್ತು ಮಸೀದಿಗಳಿಗೆ ಬೆಂಕಿ ಹಚ್ಚುವ ದೇಶವೊಂದಕ್ಕೆ ಖಂಡಿತವಾಗಿಯೂ ಇತರರಿಗೆ ಉಪದೇಶ ನೀಡುವ ಅರ್ಹತೆಯಿಲ್ಲ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News