ರೋಹಿತ್ ನಾಯಕತ್ವ ಮುಂದಿನ ವಿಶ್ವಕಪ್ ವಿಜಯಕ್ಕೆ ನೆರವು

Update: 2018-09-30 18:20 GMT

ದುಬೈ, ಸೆ.30: ಆರಂಭಿಕ ದಾಂಡಿಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಏಶ್ಯಕಪ್ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ರೋಚಕ ಗೆಲುವು ದಾಖಲಿಸಿರುವ ಹಿನ್ನೆಲೆಯಲ್ಲಿ ಮುಂದಿನ ವಿಶ್ವಕಪ್‌ಗೆ ಸಮರ್ಥ ತಂಡ ಕಟ್ಟಲು ಸಹಕಾರಿಯಾಗಿದೆ.

ಶುಕ್ರವಾರ ರಾತ್ರಿ ನಡೆದ ಬಾಂಗ್ಲಾದೇಶ ವಿರುದ್ಧದ ಫೈನಲ್‌ನಲ್ಲಿ ಟೀಮ್ ಇಂಡಿಯಾವನ್ನು ಬೌಲರ್‌ಗಳಾದ ಕೇದಾರ್ ಜಾಧವ್ ಮತ್ತು ಕುಲ್‌ದೀಪ್ ಯಾದವ್ ಕೊನೆಯ ಎಸೆತದಲ್ಲಿ ಲೆಗ್‌ಬೈ ಓಡಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು. ಕೊನೆಯ ಎಸೆತದಲ್ಲಿ ಕೇದಾರ್ ಜಾಧವ್ ಬ್ಯಾಟ್‌ಗೆ ಚೆಂಡು ಸಿಗದಿದ್ದರೂ ಲೆಗ್‌ಬೈ ಮೂಲಕ ರನ್ ಕಬಳಿಸಿ ಬಾಂಗ್ಲಾದ ಕೈಗೆ ಟ್ರೋಫಿ ಸಿಗದಂತೆ ಮಾಡಿದರು. ಬಾಂಗ್ಲಾದ ಆಟಗಾರರ ಹೋರಾಟ ಫಲ ನೀಡಲಿಲ್ಲ.

ಹಂಗಾಮಿ ನಾಯಕ ರೋಹಿತ್ ಶರ್ಮಾ ಫೈನಲ್‌ನಲ್ಲಿ 48 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ರೊಹಿತ್ ಶರ್ಮಾ ನೇತೃತ್ವದಲ್ಲಿ ಭಾರತ ಅಜೇಯವಾಗಿ ಫೈನಲ್ ತಲುಪಿ ಟ್ರೋಫಿಯನ್ನು ತನ್ನದಾಗಿಸಿದೆ.

ಬಾಂಗ್ಲಾಕ್ಕೆ ಫೈನಲ್‌ನಲ್ಲಿ ಸತತ ಎರಡನೇ ಬಾರಿ ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋಲುಣಿಸಿ ಪ್ರಶಸ್ತಿ ಎತ್ತಿಕೊಂಡಿದೆ. ಮೂರನೇ ಬಾರಿ ಫೈನಲ್‌ನಲ್ಲಿ ಬಾಂಗ್ಲಾದ ಚೊಚ್ಚಲ ಪ್ರಶಸ್ತಿ ಜಯಿಸುವ ಕನಸು ನನಸಾಗಲಿಲ್ಲ. ಭಾರತ 7ನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಬ್ಯಾಟಿಂಗ್‌ನಲ್ಲಿ ಉತ್ತಮ ಕೊಡುಗೆ ನೀಡುವ ಮೂಲಕ ತಂಡದ ಗೆಲುವಿಗೆ ನೆರವಾಗಿದ್ದಾರೆ.

ರೋಹಿತ್ ಶರ್ಮಾ 5 ಇನಿಂಗ್ಸ್‌ಗಳಲ್ಲಿ 1 ಶತಕ ಮತ್ತು 2 ಅರ್ಧಶತಕಗಳನ್ನು ಒಳಗೊಂಡ 317 ರನ್ ಮತ್ತು ಧವನ್ 5 ಇನಿಂಗ್ಸ್‌ಗಳಲ್ಲಿ 2 ಶತಕ ಮತ್ತು 1 ಅರ್ಧ ಶತಕ ಇರುವ 342 ರನ್ ದಾಖಲಿಸಿದ್ದರು.

  ರೋಹಿತ್ ಶರ್ಮಾ ಅವರಿಗೆ 6 ಟೆಸ್ಟ್ ಗಳಲ್ಲಿ ಅವಕಾಶ ನಿರಾಕರಿಸಲಾಗಿತ್ತು. ಇದರಿಂದ ನೊಂದುಕೊಂಡಿದ್ದ ಅವರು ಏಕದಿನ ಕ್ರಿಕೆಟ್‌ನಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟರು. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಏಶ್ಯಕಪ್‌ನಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದಾಗ ರೋಹಿತ್ ಶರ್ಮಾ ಇದನ್ನು ಸವಾಲಾಗಿ ಸ್ವೀಕರಿಸಿದರು. ಕೊಹ್ಲಿಗೆ ವಿಶ್ರಾಂತಿ ನೀಡಿದ ವಿಚಾರ ಚರ್ಚೆಗೆ ಕಾರಣವಾಗಿದ್ದರೂ, ನಾಯಕತ್ವದ ವಿಚಾರದಲ್ಲಿ ಕೊಹ್ಲಿಗಿಂತ ತಾನೇ ಬಲಿಷ್ಠ ಎನ್ನುವುದನ್ನು ತೋರಿಸಿಕೊಟ್ಟರು. ರೋಹಿತ್ ಶರ್ಮಾ ಅವರು ಮೂರು ಬಾರಿ ಸೀಮಿತ ಓವರ್‌ಗಳ ಕ್ರಿಕೆಟ್ ಟೂರ್ನಮೆಂಟ್‌ಗೆ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದರು. ಅವರು ತನ್ನ ಮೇಲೆ ಆಯ್ಕೆ ಸಮಿತಿ ಇಟ್ಟಿರುವ ವಿಶ್ವಾಸಕ್ಕೆ ತಕ್ಕಂತೆ ಆಡಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಯಶಸ್ವಿಯಾಗಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಗದರ್ಶನ ರೋಹಿತ್‌ಗೆ ಏಶ್ಯಕಪ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಲು ನೆರವಾಗಿದೆ.

  ಐಪಿಎಲ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಜಯಿಸಿತ್ತು. ವಿರಾಟ್ ಕೊಹ್ಲಿ ಅವರ ನಾಯಕತ್ವದ ಆರ್‌ಸಿಬಿಗೆ ಒಂದು ಬಾರಿಯೂ ಐಪಿಎಲ್ ಟ್ರೋಫಿ ಎತ್ತಲು ಸಾಧ್ಯವಾಗಿಲ್ಲ. ಈ ಕಾರಣದಿಂದಾಗಿ ರೋಹಿತ್ ಶರ್ಮಾ ಅವರು ನಾಯಕತ್ವದಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸಿದ್ದಾರೆ. ತಂಡದ ಪೂರ್ಣಾವಧಿ ನಾಯಕತ್ವ ವಹಿಸಿಕೊಳ್ಳಲು ರೋಹಿತ್ ಸಿದ್ಧರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News