ಋತುಸ್ರಾವ ಮತ್ತು ದೇಗುಲ ಪ್ರವೇಶ

Update: 2018-09-30 18:36 GMT

ಮಾನ್ಯರೇ,
ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಕಾನೂನಿನ ಸಮ್ಮತಿ ದೊರಕಿರುವುದು ನಿಜಕ್ಕೂ ಸಂತೋಷದ ಸಂಗತಿ. ಮಾತ್ರವಲ್ಲ ಮಹಿಳಾ ಹೋರಾಟಕ್ಕೆ ಸಿಕ್ಕ ಜಯವೂ ಹೌದು. ಹಲವು ವರ್ಷಗಳಿಂದ ಮಹಿಳಾ ಪ್ರವೇಶದ ಮೇಲೆ ಹೇರಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿರುವುದು ಸ್ವಾಗತಾರ್ಹವೇ. ಆದರೆ ಈ ತೀರ್ಪನ್ನು ದೇವಸ್ಥಾನದ ಅರ್ಚಕರು ಗೌರವಿಸಿದ್ದಾರೆಯೇ ಹೊರತು ಒಪ್ಪಿಕೊಂಡಿಲ್ಲ. ದೇವಸ್ಥಾನ ಪ್ರವೇಶಿಸುವಾಗ ಮುಟ್ಟಾದ ಮಹಿಳೆಯರನ್ನು ಗುರುತಿಸುವ, ಅಂತಹವರ ಪ್ರವೇಶವನ್ನು ನಿರ್ಬಂಧಿಸುವ ಯಂತ್ರ ವ್ಯವಸ್ಥೆಯನ್ನು ಕೂಡ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಅಳವಡಿಸಲಾಗುವುದಂತೆ. ಹಾಗಾದರೆ ಈ ತೀರ್ಪು ಭಾಗಶಃವಷ್ಟೇ ಪ್ರವೇಶವನ್ನು ದೊರಕಿಸಿಕೊಟ್ಟಂತಾಗುತ್ತದೆಯಲ್ಲವೇ?. ಮುಟ್ಟಿನ ಬಗ್ಗೆ ಇವರಿಗೇಕೆ ಇಷ್ಟೊಂದು ಅಸಹ್ಯ. ಒಂಬತ್ತು ಮುಟ್ಟುಗಳು ಸೇರಿಯಲ್ಲವೆ ಒಂದು ಜೀವ ಸೃಷ್ಟಿಯಾಗುವುದು. ಆ ಜೀವವೇ ಅಲ್ಲವೇ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿರುವುದು. ಸಂವಿಧಾನವಾಗಲಿ, ಸುಪ್ರೀಂಕೋರ್ಟ್ ಆಗಲಿ ಋತುಸ್ರಾವವನ್ನು ಪಾಪವೆಂದಾಗಲಿ, ಸೂತಕವೆಂದಾಗಲಿ ಎಂದೂ ಕರೆದಿಲ್ಲ. ಹೀಗಿರುವಾಗ ಮುಟ್ಟನ್ನು ಮುಂದಿಟ್ಟುಕೊಂಡು ಪ್ರವೇಶ ನಿರ್ಬಂಧಿಸುವ ಹುನ್ನಾರ ಎಷ್ಟು ಸರಿ. ಇಲ್ಲಿ ಮಹಿಳೆಯ ಪ್ರಾಕೃತಿಕ ದೇಹ ಕ್ರಿಯೆಯನ್ನು ದೇವರೊಟ್ಟಿಗೆ ಸಮೀಕರಿಸಿ ತೂಗುವುದು ಉಚಿತವಲ್ಲ.

Writer - ಪ್ರದೀಪ್.ಟಿ.ಕೆ., ಕನಕಪುರ

contributor

Editor - ಪ್ರದೀಪ್.ಟಿ.ಕೆ., ಕನಕಪುರ

contributor

Similar News