ಬಾಂಬ್ ಸ್ಫೋಟಕ್ಕೆ ಬಾಲಕ ಬಲಿ: ಬಿಜೆಪಿ ಅಥವಾ ಆರೆಸ್ಸೆಸ್ ಕೃತ್ಯ; ಆರೋಪ

Update: 2018-10-02 16:01 GMT

ಕೋಲ್ಕತಾ, ಅ.2: ಕೋಲ್ಕತಾದ ನಗರ್‌ಬಝಾರ್‌ನಲ್ಲಿ ಟಿಎಂಸಿ ಕಚೇರಿ ಹೊರಗಡೆ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ 7 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಜಿಪಾರ ಎಂಬಲ್ಲಿ ಈ ಘಟನೆ ನಡೆದಿದೆ.

ಇಲ್ಲಿರುವ ಟಿಎಂಸಿ ಕಚೇರಿಯನ್ನು ಡಮ್‌ಡಮ್ ನಗರಪಾಲಿಕೆ ಅಧ್ಯಕ್ಷ ಪಂಚು ರಾಯ್ ಅವರೂ ಬಳಸುತ್ತಿದ್ದಾರೆ. ಮಂಗಳವಾರ ರಜಾ ದಿನವಾಗಿದ್ದ ಕಾರಣ ಇಲ್ಲಿ ಜನಸಂದಣಿ ಇತ್ತು ಹಾಗೂ ಹಲವಾರು ಮಕ್ಕಳು ಬೀದಿಯಲ್ಲಿ ಆಟವಾಡುತ್ತಿದ್ದಾಗ ಬಾಂಬ್ ಸ್ಫೋಟಿಸಿದೆ. ಮೃತಪಟ್ಟ ಬಾಲಕನನ್ನು 7 ವರ್ಷದ ಬಿಭಾಷ್ ಘೋಷ್ ಎಂದು ಗುರುತಿಸಲಾಗಿದ್ದು ಬಾಲಕನ ತಾಯಿ ಬಸಂತಿ ಘೋಷ್ ತೀವ್ರವಾಗಿ ಗಾಯಗೊಂಡಿದ್ದು ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಐಡಿ ಅಧಿಕಾರಿಗಳು ಹಾಗೂ ಬಾಂಬ್ ದಳ ಸ್ಥಳಕ್ಕೆ ಧಾವಿಸಿದೆ. ಒಟ್ಟು 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೊಂದು ಯೋಜಿತ ದಾಳಿಯಾಗಿದೆ ಎಂದು ಸ್ಥಳೀಯ ಟಿಎಂಸಿ ಶಾಸಕ ಪುರೇಂದು ಬಸು ಹೇಳಿದ್ದಾರೆ. ಪ್ರತೀ ದಿನ ಬೆಳಿಗ್ಗಿನ ವೇಳೆ ಟಿಎಂಸಿ ಮುಖಂಡರು ಅಲ್ಲಿರುವ ಕಚೇರಿಯಲ್ಲಿರುತ್ತಾರೆ. ಸಿಪಿಎಂ, ಕಾಂಗ್ರೆಸ್ ಅಥವಾ ಟಿಎಂಸಿ ಈ ಕೃತ್ಯ ಎಸಗಲು ಸಾಧ್ಯವಿಲ್ಲ. ಖಂಡಿತಾ ಇದು ಬಿಜೆಪಿ ಅಥವಾ ಆರೆಸ್ಸೆಸ್‌ನ ಕೃತ್ಯವಾಗಿದೆ ಎಂದವರು ದೂರಿದ್ದಾರೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಿಪಿಐ(ಎಂ) ಮುಖಂಡ ಸುಜನ್ ಚಕ್ರವರ್ತಿ ಪ್ರತೀ ದಿನ ರಾಜ್ಯದಲ್ಲಿ ಬಾಂಬ್ ಸ್ಫೋಟ ಸಂಭವಿಸುತ್ತಿದೆ. ನಮಗೆ ಲಂಡನ್‌ನ ಅಗತ್ಯವಿಲ್ಲ. ಜನತೆ ಸುರಕ್ಷಿತ ಬಂಗಾಳವನ್ನು ಅಪೇಕ್ಷಿಸುತ್ತಿದ್ದಾರೆ ಎಂಬುದನ್ನು ಮಮತಾ ಬ್ಯಾನರ್ಜಿ ಅರಿತುಕೊಳ್ಳಬೇಕು ಎಂದಿದ್ದಾರೆ.

ಇದೇ ಸಂದರ್ಭ ಆರೋಪವನ್ನು ನಿರಾಕರಿಸಿರುವ ಬಿಜೆಪಿ ಮುಖಂಡ ದಿಲೀಪ್ ಘೋಷ್, ಯಾವುದೇ ಘಟನೆ ನಡೆದರೂ ಅದಕ್ಕೆ ಬಿಜೆಪಿಯನ್ನು ದೂರುವುದು ಟಿಎಂಸಿಯ ಜಾಯಮಾನವಾಗಿದೆ. ಈ ಹಿಂದೆಯೂ ಟಿಎಂಸಿ ಕಚೇರಿಯ ಸುತ್ತಮುತ್ತ ಈ ರೀತಿಯ ಘಟನೆ ನಡೆದಿದ್ದು ಇದು ದುರದೃಷ್ಟಕರವಾಗಿದೆ. ಪ್ರಮುಖ ನಗರಗಳೂ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News