×
Ad

ಯುಪಿಎ ಸರಕಾರದ 1.3 ಲಕ್ಷ ಕೋಟಿ ರೂ. ಮೊತ್ತದ ತೈಲ ಬಾಂಡ್‍ಗಳನ್ನು ಮೋದಿ ಸರಕಾರ ಮರುಪಾವತಿ ಮಾಡಿದೆಯೇ?

Update: 2018-10-02 21:51 IST

ಹಿಂದಿನ ಯುಪಿಎ ಸರ್ಕಾರ ಬಿಡುಗಡೆ ಮಾಡಿದ್ದ ತೈಲ ಬಾಂಡ್‍ಗಳ ಪೈಕಿ 1.3 ಲಕ್ಷ ಕೋಟಿ ರೂಪಾಯಿಗಳನ್ನು ಮೋದಿ ಸರ್ಕಾರ ಮರುಪಾವತಿ ಮಾಡಿದೆ ಎಂದು ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಇತ್ತೀಚೆಗೆ ಗ್ರಾಫಿಕ್ ಟ್ವೀಟ್ ಮಾಡಿತ್ತು. ಆದರೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ಪೆಟ್ರೋಲಿಯಂ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಪಿಪಿಎಸಿ ನೀಡಿದ ಮಾಹಿತಿಯಂತೆ ಮೋದಿ ಸರ್ಕಾರ ಕೇವಲ 3,500 ಕೋಟಿ ರೂಪಾಯಿ ಮೌಲ್ಯದ ತೈಲ ಬಾಂಡ್ ಮರುಪಾವತಿ ಮಾಡಿದೆ. ಇನ್ನೂ 1.3 ಲಕ್ಷ ಕೋಟಿ ರೂಪಾಯಿ ಬಾಕಿ ಇದೆ ಎನ್ನುವುದು ಬಹಿರಂಗಗೊಂಡಿದೆ ಎಂದು ವರದಿಯಾಗಿದೆ.

ಯುಪಿಎ ಸರ್ಕಾರ ಬಿಡುಗಡೆ ಮಾಡಿದ್ದ ತೈಲ ಬಾಂಡ್‍ನ ಪೈಕಿ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಾಂಡ್‍ಗಳನ್ನು ಪ್ರಸಕ್ತ ಸರ್ಕಾರ ಮರುಪಾವತಿ ಮಾಡಿದೆ ಎಂದು ಪೆಟ್ರೋಲಿಯಂ ಖಾತೆ ಸಚಿವರೂ ಸೇರಿದಂತೆ ಹಲವು ಮಂದಿ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದರು. ಈ ಮಾಹಿತಿಯ ಗ್ರಾಫಿಕ್ ಟ್ವೀಟ್ ಮಾಡಿದ ಬಿಜೆಪಿ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್, 1.3 ಲಕ್ಷ ಕೋಟಿ ರೂಪಾಯಿ ಮರುಪಾವತಿ ಮಾಡಿದ್ದಲ್ಲದೇ 40 ಸಾವಿರ ಕೋಟಿ ರೂಪಾಯಿ ಬಡ್ಡಿ ಪಾವತಿಸಿದೆ ಎಂದು ಹೇಳಿತ್ತು.

ಆದರೆ ವಾಸ್ತವವಾಗಿ ಬಜೆಟ್ ದಾಖಲೆಯಲ್ಲಿ ಇರುವ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ಮೋದಿ ಸರ್ಕಾರ ಮರುಪಾವತಿ ಮಾಡಿರುವುದು ಕೇವಲ 3,500 ಕೋಟಿ ರೂಪಾಯಿ ಮೌಲ್ಯದ ಬಾಂಡ್‍ಗಳನ್ನು ಎನ್ನುವುದು ಖಚಿತವಾಗಿದೆ. ಇದೀಗ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶ (ಪಿಪಿಎಸಿ) ಕೂಡಾ ಇದನ್ನು ದೃಢಪಡಿಸಿದ್ದು, ಸರ್ಕಾರ ಪಾವತಿಸಿರುವುದು ಕೇವಲ 3,500 ಕೋಟಿ ರೂಪಾಯಿ ಎಂದು ಹೇಳಿದೆ.

ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಯಂತ್ರಣ ವ್ಯವಸ್ಥೆಗೆ ಒಳಪಡಿಸಿದಾಗ ತೈಲ ಬಾಂಡ್‍ಗಳನ್ನು ಬಿಡುಗಡೆ ಮಾಡಲಾಗಿತ್ತು. ಪೆಟ್ರೋಲ್/ ಡೀಸೆಲ್ ಮತ್ತು ಇತರ ತೈಲ ಉತ್ಪನ್ನಗಳಿಗೆ ನೀಡುವ ಸಬ್ಸಿಡಿ ಬಾಬ್ತು ತೈಲ ಮಾರುಕಟ್ಟೆ ಕಂಪನಿಗಳಿಗೆ ನೇರವಾಗಿ ಪಾವತಿಸುವ ಬದಲಾಗಿ, ಕಂಪನಿಗಳಿಗೆ ಪರಿಹಾರವಾಗಿ ಸರ್ಕಾರ ತೈಲ ಬಾಂಡ್‍ಗಳನ್ನು ಬಿಡುಗಡೆ ಮಾಡಿತ್ತು. ಇದು ಸರ್ಕಾರಿ ಭದ್ರತಾ ಪತ್ರಗಳ ಮಾದರಿಯಲ್ಲಿತ್ತು. ಭದ್ರತಾ ಪತ್ರಗಳು ಸಾಮಾನ್ಯವಾಗಿ ಸುದೀರ್ಘ ಅವಧಿಯದ್ದಾಗಿದ್ದು, 10- 20 ವರ್ಷ ಅವಧಿಗೆ ಇರುತ್ತದೆ. ಉದಾಹರಣೆಗೆ ಯುಪಿಎ ಸರ್ಕಾರ ತೈಲ ಬಾಂಡ್ ಬಿಡುಗಡೆ ಮಾಡುವ ಸಂದರ್ಭ ಹೊರಡಿಸಿದ ಅಧಿಸೂಚನೆ ಈ ಕೆಳಗಿದೆ.

ಹಿಂದಿನ ಎಲ್ಲ ಸರ್ಕಾರಗಳು ಕೂಡಾ 2010ರವರೆಗೆ ಅಂದರೆ ತೈಲ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸುವವರೆಗೆ ತೈಲಬಾಂಡ್ ಬಿಡುಗಡೆ ಮಾಡಿವೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಹಿಂದಿನ ಎನ್‍ಡಿಎ ಸರ್ಕಾರ ಕೂಡಾ ತೈಲಬಾಂಡ್ ಬಿಡುಗಡೆ ಮಾಡಿತ್ತು. 2002-03ರ ಬಜೆಟ್‍ನಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು, ಸರ್ಕಾರ ತೈಲ ಬಾಂಡ್ ಬಿಡುಗಡೆ ಮಾಡುತ್ತದೆ ಎಂದು ಉಲ್ಲೇಖಿಸಿದ್ದರು.

ಪಿಪಿಎಸಿ ತನ್ನ ಉತ್ತರದಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, 2004-05ರಿಂದ 17 ಬಾರಿ ತೈಲ ಬಾಂಡ್ ಬಿಡುಗಡೆ ಮಾಡಲಾಗಿದೆ. ಒಟ್ಟು 1.42 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಾಂಡ್ ಬಿಡುಗಡೆ ಮಾಡಲಾಗಿದೆ. ಕೇವಲ ಅಂತಹ ಆರು ಬಾಂಡ್‍ಗಳು ಮಾತ್ರ ಪರಿಪಕ್ವಗೊಂಡಿದ್ದು, ಸರ್ಕಾರ ಅವುಗಳನ್ನು ಮರುಪಾವತಿ ಮಾಡಿದೆ. ಎರಡು ಬಾಂಡ್‍ಗಳು 2009ರಲ್ಲಿ ಮತ್ತು 2009ರಲ್ಲಿ ತಲಾ ಎರಡು ಬಾಂಡ್‍ಗಳು ಪರಿಪಕ್ವಗೊಂಡಿದ್ದರೆ, ಉಳಿದ ಎರಡು ಬಾಂಡ್‍ಗಳ ಅವಧಿ 2015ರಲ್ಲಿ ಮುಕ್ತಾಯವಾಗಿದೆ. 2009 ಮತ್ತು 2012ರಲ್ಲಿ ಅವಧಿ ಮುಗಿದ ಬಾಂಡ್‍ಗಳ ಮೌಲ್ಯವನ್ನು ಯುಪಿಎ-2 ಸರ್ಕಾರ ಮರುಪಾವತಿ ಮಾಡಿತ್ತು. ತಲಾ 1,750 ಕೋಟಿ ರೂಪಾಯಿ ಮೌಲ್ಯದ ಎರಡು ಬಾಂಡ್‍ಗಳ ಮೌಲ್ಯವನ್ನು ಅಂದರೆ 3500 ಕೋಟಿ ರೂಪಾಯಿಗಳನ್ನು ಪ್ರಸಕ್ತ ಸರ್ಕಾರ ಮರುಪಾವತಿ ಮಾಡಿದೆ. ಒಟ್ಟು 11 ಬಾಂಡ್‍ಗಳು ಪರಿಪಕ್ವಗೊಳ್ಳಬೇಕಿದ್ದು, ಇವುಗಳ ಮೌಲ್ಯ 1.3 ಲಕ್ಷ ಕೋಟಿಗಿಂತ ಅಧಿಕ. ಅತಿಶೀಘ್ರದಲ್ಲಿ ಪರಿಪಕ್ವಗೊಳ್ಳುವ ಬಾಂಡ್‍ಗಳು 2021ರಲ್ಲಿ ಪರಿಪಕ್ವಗೊಳ್ಳಲಿವೆ.

ತೈಲ ಬಾಂಡ್‍ಗಳ ಬಡ್ಡಿ ಕಥೆ ಏನು?

ಭಾರತ ಸರ್ಕಾರ ಪಾವತಿಸಿದ ಬಡ್ಡಿ ವಿವರಗಳು, ಹಣಕಾಸು ಸಚಿವಾಲಯದ ವೆಚ್ಚ ಬಜೆಟ್‍ನ ಅನುದಾನ ಬೇಡಿಕೆ ದಾಖಲೆಯಲ್ಲಿ "ಬಡ್ಡಿ ಪಾವತಿ" ಎಂಬ ಶೀರ್ಷಿಕೆಯಡಿ ಸಿಗುತ್ತವೆ. ಈ ದಾಖಲೆಯಲ್ಲಿ ಸರ್ಕಾರ ಇದುವರೆಗೆ ಪಾವತಿಸಿರುವ ಎಲ್ಲ ಬಡ್ಡಿ ವಿವರಗಳು ಸಿಗುತ್ತವೆ. ತೈಲ ಕಂಪನಿಗಳಿಗೆ ವಿಶೇಷ ಬಾಂಡ್ ನಡಿ ಪಾವತಿಸುವ ಬಡ್ಡಿ ವಿವರಗಳೂ ಲಭ್ಯ. ಕಳೆದ 20 ವರ್ಷಗಳ ಅಂಕಿ ಅಂಶಗಳಿಂದ ತಿಳಿದುಬರುವಂತೆ ವಿವಿಧ ಸರ್ಕಾರಗಗಳು (ಯುಪಿಎ ಹಾಗೂ ಎನ್‍ಡಿಎ) ತೈಲ ಬಾಂಡ್‍ಗಳ ಮೇಲೆ ಬಡ್ಡಿ ಪಾವತಿಸುತ್ತಿವೆ. ಹಲವು ತೈಲ ಬಾಂಡ್‍ಗಳನ್ನು ಬಿಡುಗಡೆ ಮಾಡಿದ ಕಾರಣದಿಂದ ಯುಪಿಎ-1 ಅಧಿಕಾರಾವಧಿಯಲ್ಲಿ ಬಡ್ಡಿಯ ಹೊಣೆಗಾರಿಕೆ ಅತ್ಯಧಿಕವಾಗಿತ್ತು. 2009-10ರಿಂದ 2013-14ರವರೆಗೆ ಐದು ವರ್ಷದ ಅಧಿಕಾರಾವಧಿಯಲ್ಲಿ ಯುಪಿಎ-2 ಸರ್ಕಾರ ಒಟ್ಟು 53,163 ಕೋಟಿ ರೂಪಾಯಿಗಳನ್ನು ತೈಲ ಬಾಂಡ್‍ಗಳಿಗೆ ಬಡ್ಡಿ ರೂಪದಲ್ಲಿ ಪಾವತಿಸಿದೆ. ಇನ್ನೊಂದೆಡೆ 2014-14ರಿಂದ 2017-18ರ ಅವಧಿಯಲ್ಲಿ ಅಂದರೆ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಸಕ್ತ ಎನ್‍ಡಿಎ ಸರ್ಕಾರ 40,225 ಕೋಟಿ ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಾವತಿಸಿದೆ. 2018-19ರ ಅವಧಿಯಲ್ಲಿ 99,989.96 ಕೋಟಿ ರೂಪಾಯಿಗಳ ಬಡ್ಡಿಪಾವತಿಗೆ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಿಕೊಂಡಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಪಾವತಿಸಿರುವ ಬಡ್ಡಿಯ ಮೊತ್ತದಿಂದ ಸ್ಪಷ್ಟವಾಗಿ ತಿಳಿದುಬರುವ ಅಂಶವೆಂದರೆ, ಬಾಕಿ ಇರುವ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಂದರೆ 2015ರನ್ನು ಹೊರತುಪಡಿಸಿ, ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಬಾಂಡ್ ಮೊತ್ತ ಮರುಪಾವತಿಯಾಗಿಲ್ಲ. ನಾಲ್ಕು ವರ್ಷಗಳಲ್ಲಿ ಮೋದಿ ಸರ್ಕಾರ 40 ಸಾವಿರ ಕೋಟಿ ರೂಪಾಯಿಗಳ ಬಡ್ಡಿ ಪಾವತಿಸಿರುವುದು ನಿಜವಾದರೂ, ಯುಪಿಎ-2 ಸರ್ಕಾರ ಕೂಡಾ ಇಷ್ಟೇ ಮೊತ್ತದ ಬಡ್ಡಿಯನ್ನು ತಮ್ಮ ಅಧಿಕಾರಾವಧಿಯಲ್ಲಿ ಪಾವತಿಸಿತ್ತು.

2014-15 ರಿಂದ 2017-18ರ ಅವಧಿಯಲ್ಲಿ ಭಾರತ ಸರ್ಕಾರ ಸಂಗ್ರಹಿಸಿದ ಒಟ್ಟು ಎಕ್ಸೈಸ್ ಸುಂಕದ ಮೌಲ್ಯ 7,49,485 ಕೋಟಿ ರೂಪಾಯಿ. ಇದೇ ಅವಧಿಯಲ್ಲಿ ಸರ್ಕಾರ ಒಟ್ಟು 43,725 ಕೋಟಿ ರೂಪಾಯಿಗಳನ್ನು ತೈಲಬಾಂಡ್‍ಗಳ ಮರುಪಾವತಿ ಮತ್ತು ಬಡ್ಡಿ ಪಾವತಿಗಾಗಿ ವೆಚ್ಚ ಮಾಡಿದೆ. ತೈಲಬಾಂಡ್‍ಗೆ ಮಾಡಿರುವ ಒಟ್ಟು ವೆಚ್ಚವು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸಂಗ್ರಹಿಸಿದ ಎಕ್ಸೈಸ್ ಸುಂಕದ ಶೇಕಡ 6ಕ್ಕಿಂತಲೂ ಕಡಿಮೆ ಎನ್ನುವುದು ಗಮನಿಸಬೇಕಾದ ವಿಚಾರ. ಈ ಕಾರಣದಿಂದಾಗಿ, ತೆರಿಗೆಯ ಹೆಚ್ಚಳ ಸಮರ್ಥನೀಯವಲ್ಲ.

ಕೃಪೆ: thelogicalindian.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News