×
Ad

ಬಿಜೆಪಿಗೆ ಈಗ ಗಾಂಧೀಜಿಯ ನೆನಪಾಗುತ್ತಿದೆ: ಅಹ್ಮದ್ ಪಟೇಲ್

Update: 2018-10-02 22:02 IST

ಮುಂಬೈ, ಅ.2: ಕಾಂಗ್ರೆಸ್ ಪಕ್ಷ ಈ ಹಿಂದಿನಿಂದಲೂ ಸದ್ಭಾವನಾ ರಾಜಕೀಯದ ನೀತಿ ಅನುಸರಿಸುತ್ತಿದ್ದು, ಮಹಾತ್ಮಾ ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದೆ. ಆದರೆ ಬಿಜೆಪಿಗೆ ಈಗಷ್ಟೇ ಮಹಾತ್ಮಾ ಗಾಂಧೀಜಿ ಮತ್ತು ವಲ್ಲಭಬಾಯ್ ಪಟೇಲ್ ನೆನಪಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಹೇಳಿದ್ದಾರೆ. ಮಹಾರಾಷ್ಟ್ರದ ವಾರ್ಧಾದಲ್ಲಿರುವ ಸೇವಾಗ್ರಾಮ ಆಶ್ರಮದಲ್ಲಿ ಮಂಗಳವಾರ ನಡೆದ ಪ್ರಾರ್ಥನಾ ಸಭೆಯ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಬಳಿಕ ಇಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ವಾರ್ಧಾದ ಸೇವಾಶ್ರಮದಲ್ಲಿ ಇದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ದ್ವಿತೀಯ ಸಭೆಯಾಗಿದೆ. ಈ ಮೊದಲು 76 ವರ್ಷಗಳ ಹಿಂದೆ ಗಾಂಧೀಜಿ ಬ್ರಿಟಿಷರ ವಿರುದ್ಧ ‘ಕ್ವಿಟ್ ಇಂಡಿಯಾ’ ಚಳವಳಿಗೆ ಕರೆಕೊಟ್ಟ ಸಂದರ್ಭ ಇದೇ ಸ್ಥಳದಲ್ಲಿ ಸಭೆ ಸೇರಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಈ ಕರೆಯನ್ನು ಅಂಗೀಕರಿಸಿದ್ದರು ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ತಮ್ಮ ಅಂತಿಮ ದಿನಗಳನ್ನು ಕಳೆದ ಬಾಪು ಕುಟಿ ಎಂಬಲ್ಲಿರುವ ಸೇವಾಶ್ರಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರು ಗಾಂಧೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಅಶೋಕ್ ಗೆಹ್ಲೋಟ್, ಮಲ್ಲಿಕಾರ್ಜುನ ಖರ್ಗೆ, ಗುಲಾಂ ನಬಿ ಆಝಾದ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಕಾಂಗ್ರೆಸ್ ಮುಖಂಡರು ಪ್ರಾರ್ಥನಾ ಸಭೆಯಲ್ಲಿ ಪಾಲ್ಗೊಂಡರು. ಸೇವಾಶ್ರಮದಲ್ಲಿ ಮಧ್ಯಾಹ್ನದ ಊಟ ಸವಿದ ಬಳಿಕ ಸೋನಿಯಾ , ರಾಹುಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ತಮ್ಮ ಊಟದ ತಟ್ಟೆಗಳನ್ನು ತಾವೇ ತೊಳೆಯುತ್ತಿರುವ ವೀಡಿಯೊ ದೃಶ್ಯಾವಳಿ ವೈರಲ್ ಆಗಿದೆ.

ಇಲ್ಲಿ 1986ರ ಅಕ್ಟೋಬರ್ 2ರಂದು ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಸಸಿಯೊಂದನ್ನು ನೆಟ್ಟಿದ್ದು ಇದರ ಬಳಿ ರಾಹುಲ್ ಗಾಂಧಿ ಸಸಿಯೊಂದನ್ನು ನೆಟ್ಟರು. ಬಳಿಕ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮದ ಆರಂಭದ ಸಂಕೇತವಾಗಿ ಹಾಗೂ ದೇಶದಲ್ಲಿ ಈಗಿರುವ ‘ಭೀತಿಯ ವಾತಾವರಣದ’ ಬಗ್ಗೆ ಎಚ್ಚರಿಕೆ ನೀಡುವ ಸಲುವಾಗಿ ಹಮ್ಮಿಕೊಳ್ಳಲಾದ ಪಾದಯಾತ್ರೆಗೆ ರಾಹುಲ್ ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News