335 ಪ್ರಯಾಣಿಕರನ್ನು ಹೊತ್ತ ಹಡಗಿಗೆ ಬೆಂಕಿ
Update: 2018-10-02 22:09 IST
ವಿಲ್ನಿಯಸ್ (ಲಿಥುವೇನಿಯ), ಅ. 2: ಬಾಲ್ಟಿಕ್ ಸಮುದ್ರದಲ್ಲಿ 335 ಪ್ರಯಾಣಿಕರನ್ನು ಒಯ್ಯುತ್ತಿದ್ದ ಲಿಥುವೇನಿಯ ದೇಶಕ್ಕೆ ಸೇರಿದ ಹಡಗೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಲಿಥುವೇನಿಯ ಸೇನೆ ಮಂಗಳವಾರ ಹೇಳಿದೆ.
ಆದರೆ, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ, ಯಾರೂ ಅಸ್ವಸ್ಥಗೊಂಡಿಲ್ಲ ಎಂದು ಡೆನ್ಮಾರ್ಕ್‌ನ ಹಡಗು ಕಂಪೆನಿ ಡಿಎಫ್‌ಡಿಎಸ್ 'ರಾಯ್ಟರ್ಸ್'ಗೆ ತಿಳಿಸಿದೆ.
''ಹಡಗಿನಲ್ಲಿ ಕಂಪನ ಸಂಭವಿಸಿತು ಮತ್ತು ಹೊಗೆ ಕಾಣಿಸಿಕೊಂಡಿತು, ಆದರೆ, ಬೆಂಕಿ ಕಾಣಿಸಿಕೊಂಡಿಲ್ಲ'' ಕಂಪೆನಿಯ ವಕ್ತಾರರು ಹೇಳಿದರು.
ದೋಣಿಯನ್ನು ಬಂದರಿಗೆ ಎಳೆದುಕೊಂಡು ಬರಬೇಕಾಗಿದೆ ಎಂದು ಅವರು ತಿಳಿಸಿದರು.
ಆದರೆ, ಪ್ರಯಾಣಿಕರು ಮತ್ತು ಸಿಬ್ಬಂದಿ ಅಪಾಯದಲ್ಲಿದ್ದಾರೆಯೇ ಎನ್ನುವುದನ್ನು ಅವರು ಹೇಳಿಲ್ಲ.
''ಬೆಂಕಿಯನ್ನು ನಂದಿಸಲಾಗಿದೆ ಹಾಗೂ ಲಿಥುವೇನಿಯದ ನಾಲ್ಕು ಸೇನಾ ಹಡಗುಗಳು ದೋಣಿಯತ್ತ ಧಾವಿಸುತ್ತಿವೆ'' ಎಂದು ಲಿಥುವೇನಿಯದ ರಕ್ಷಣಾ ಸಚಿವಾಲಯ ತಿಳಿಸಿದೆ.