ಸಿಜೆಐ ಮಿಶ್ರಾ ಪರಿಸ್ಥಿತಿಯ ಬಲಿಪಶುವಾಗಿದ್ದರು: ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ

Update: 2018-10-02 17:24 GMT

ಹೊಸದಿಲ್ಲಿ, ಅ.2: ನಿರ್ಗಮನ ಮುಖ್ಯ ನ್ಯಾಯಮೂರ್ತಿ (ಸಿಐಜೆ) ದೀಪಕ್ ಮಿಶ್ರಾ ಅವರು ಪರಿಸ್ಥಿತಿಯ ಬಲಿಪಶುವಾಗಿದ್ದರು ಮತ್ತು ಈ ಪರಿಸ್ಥಿತಿಯನ್ನು ಕೆಲವು ವಕೀಲರು ವ್ಯವಸ್ಥೆಗೆ ಹಾನಿಯಾಗುವಂತೆ ಬಳಸಿಕೊಂಡರು ಎಂದು ಸುಪ್ರೀಂಕೋರ್ಟ್ ವಕೀಲರ ಸಂಘ(ಎಸ್‌ಸಿಬಿಎ)ದ ಅಧ್ಯಕ್ಷ ವಿಕಾಸ್ ಸಿಂಗ್ ಹೇಳಿದ್ದಾರೆ.

ದೀಪಕ್ ಮಿಶ್ರ ಅವರ ಗೌರವಾರ್ಥವಾಗಿ ಹೊಸದಿಲ್ಲಿಯಲ್ಲಿ ಎಸ್‌ಸಿಬಿಎ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಸಿಂಗ್, ಮಿಶ್ರಾ ಪರಿಸ್ಥಿತಿಯ ಬಲಿಪಶುವಾಗಿದ್ದರು. ಆದರೆ ಕೆಲವು ವಕೀಲರು ಈ ಪರಿಸ್ಥಿತಿಯ ದುರ್ಲಾಭ ಪಡೆಯಲು ಮುಂದಾದರು. ಈ ಹಂತದಲ್ಲಿ ಮಿಶ್ರಾ ಅವರ ನೆರವಿಗೆ ಎಸ್‌ಸಿಬಿಎ ಮುಂದಾಗದಿದ್ದರೆ ಸುಪ್ರೀಂಕೋರ್ಟ್‌ಗೆ ಸರಿಪಡಿಸಲಾಗದ ಹಾನಿಯಾಗುವ ಸಾಧ್ಯತೆಯಿತ್ತು ಎಂದರು. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ) ಹಾಗೂ ಕೆಲವು ವೈದ್ಯಕೀಯ ಕಾಲೇಜುಗಳಿಗೆ ಸಂಬಂಧಿಸಿದ ಪ್ರಕರಣಗಳ ಕುರಿತ ವಿವಾದವನ್ನು ಉಲ್ಲೇಖಿಸಿದ ಅವರು, ಎಸ್‌ಸಿಬಿಎ ಅಧ್ಯಕ್ಷನಾಗಿ ತಾನು ಬರೆದಿದ್ದ ಪತ್ರದ ಉದ್ದೇಶ ಸಿಜೆಐ ಮಿಶ್ರಾರನ್ನು ಬೆಂಬಲಿಸುವುದು ಆಗಿರಲಿಲ್ಲ. ಸುಪ್ರೀಂಕೋರ್ಟ್‌ನ ಘನತೆಗೆ ಕುಂದು ಉಂಟಾಗಿಲ್ಲ ಎಂಬ ಸತ್ಯವನ್ನು ದೇಶದ ಮುಂದಿಡುವುದು ಈ ಪತ್ರದ ಉದ್ದೇಶವಾಗಿತ್ತು ಎಂದರು.

 ಸುಪ್ರೀಂಕೋರ್ಟ್‌ನ ಮೇಲೆ ಜನರಿಗೆ ಈ ಹಿಂದಿದ್ದ ವಿಶ್ವಾಸ ಈಗಿಲ್ಲ ಮತ್ತು ಜನತೆ ಸುಪ್ರೀಂಕೋರ್ಟ್‌ನ ಮೇಲೆ ಅನುಮಾನ ಪಡಲು ಆರಂಭಿಸಿದ್ದಾರೆ. ಸುಪ್ರೀಂಕೋರ್ಟ್‌ನ ಘನತೆಗೆ ಹಾನಿಯಾಗದಿದ್ದರೆ ಮಾತ್ರ ನಮಗೆ ದೊರಕಿರುವ ಸ್ವಾತಂತ್ರ್ಯ, ನಾವು ಕಾಯ್ದುಕೊಂಡು ಬಂದಿರುವ ಮೌಲ್ಯಗಳು ಸತ್ಯವಾಗಿ ಉಳಿದುಕೊಳ್ಳಲು ಸಾಧ್ಯ ಎಂದವರು ಹೇಳಿದರು. ನಿವೃತ್ತರಾದ ಮೇಲೆ ಮಿಶ್ರಾ ಯಾವುದೇ ಹುದ್ದೆ ವಹಿಸಿಕೊಳ್ಳಬಾರದು ಎಂದು ಒತ್ತಾಯಿಸಿ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರು ಬರೆದಿರುವ ಪತ್ರಕ್ಕೆ ತನ್ನ ಸಹಮತವಿಲ್ಲ. ನಿವೃತ್ತ ಸಿಜೆಐ ರಾಜ್ಯಪಾಲರಂತಹ ರಾಜಕೀಯ ಹುದ್ದೆಗಳನ್ನು ಒಪ್ಪಿಕೊಳ್ಳಬಾರದು. ಆದರೆ ಅಟಾರ್ನಿ ಜನರಲ್‌ರಂತಹ ಹುದ್ದೆಗಳಲ್ಲಿ ತಮ್ಮ ಅನುಭವದ ಜ್ಞಾನವನ್ನು ಅವರು ಸರಕಾರಕ್ಕೆ ಒದಗಿಸುವಲ್ಲಿ ಯಾವುದೇ ತಪ್ಪಿಲ್ಲ ಎಂದು ಸಿಂಗ್ ಅಭಿಪ್ರಾಯಪಟ್ಟರು. 65 ವರ್ಷ ಎಂಬುದು ನಿವೃತ್ತಿಯಾಗುವ ವಯಸ್ಸಲ್ಲ ಎಂದು ಇದೇ ಸಂದರ್ಭ ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News