ಗೌತಮ್ ನವ್ಲಾಖಾ ಬಿಡುಗಡೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಹಾರಾಷ್ಟ್ರ ಸರಕಾರ
Update: 2018-10-03 21:32 IST
ಹೊಸದಿಲ್ಲಿ, ಅ. 3: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಐವರು ಮಾನವ ಹಕ್ಕು ಹೋರಾಟಗಾರರಲ್ಲಿ ಓರ್ವರಾದ ಗೌತಮ್ ನವ್ಲಾಖಾ ಅವರನ್ನು ಗೃಹ ಬಂಧನದಿಂದ ಬಿಡುಗಡೆಗೊಳಿಸಿದ ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರಕಾರ ಬುಧವಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ.
ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಬುಧವಾರ ಬೆಳಗ್ಗೆ ಮನವಿ ಸಲ್ಲಿಸಲಾಗಿದೆ ಎಂದು ಮಹಾರಾಷ್ಟ್ರ ಸರಕಾರದ ಪರ ವಕೀಲ ನಿಶಾಂತ್ ಕಟ್ನೇಶ್ವರ್ ಅವರು ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ನಾಲ್ವರು ಇತರ ಮಾನವ ಹಕ್ಕು ಹೋರಾಟಗಾರರೊಂದಿಗೆ ಬಂಧಿಸಿತರಾದ ಐದು ವಾರಗಳ ಬಳಿಕ ನವ್‌ಲಾಖಾ ಅವರನ್ನು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ಬಿಡುಗಡೆ ಮಾಡಿತ್ತು.