ಸಂಪುಟದಿಂದ ರಾಬಿ ಬೆಳೆಯ ಕನಿಷ್ಠ ಬೆಂಬಲ ಬೆಲೆ ಏರಿಕೆ
ಹೊಸದಿಲ್ಲಿ, ಅ. 3: ಅತ್ಯಧಿಕ ಕನಿಷ್ಠ ಬೆಂಬಲ ಬೆಲೆ ಹಾಗೂ ಸಾಲ ಮನ್ನಾದಲ್ಲಿ ಏಕರೂಪತೆ ಆಗ್ರಹಿಸಿ ದಿಲ್ಲಿ ಪ್ರವೇಶಿಸಲು ಯತ್ನಿಸಿದ ರೈತರು ಹಾಗೂ ಪೊಲೀಸರ ನಡುವೆ ಉತ್ತರಪ್ರದೇಶ ಗೇಟ್-ದಿಲ್ಲಿ ಗಡಿಯಲ್ಲಿ ಘರ್ಷಣೆ ನಡೆದ ಒಂದು ದಿನದ ಬಳಿಕ 2018-19ನೇ ಸಾಲಿನ ರಾಬಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಸಂಪುಟ ಬುಧವಾರ ಏರಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಗೋಧಿಗೆ ಕ್ವಿಂಟಾಲ್‌ಗೆ ರೂ. 105, ಮಸೂರ್ ಕ್ವಿಂಟಾಲ್‌ಗೆ ರೂ. 225, ಸನ್‌ಫ್ಲವರ್ ಕ್ವಿಂಟಾಲ್‌ಗೆ ರೂ. 845 ಹಾಗೂ ಬೇಳೆ ಕ್ವಿಂಟಾಲ್‌ಗೆ ರೂ. 220 ಕನಿಷ್ಠ ಬೆಂಬಲ ಬೆಲೆ ಏರಿಕೆಗೆ ಅನುಮೋದನೆ ನೀಡಲಾಗಿದೆ. ಉತ್ಪಾದನಾ ವೆಚ್ಚದ ಮೇಲಿನ ಶೇ. 50 ಲಾಭವನ್ನು ರೈತರಿಗೆ ನೀಡುವ ಸರಕಾರದ ಘೋಷಣೆಯಂತೆ ಹಾಗೂ ಕೃಷಿ ಸಲಹಾ ಘಟಕ ಸಿಸಿಪಿ ಶಿಫಾರಸಿಗೆ ಅನುಗುಣವಾಗಿ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ.
‘‘ಉತ್ಪಾದನಾ ವೆಚ್ಚದ ಕನಿಷ್ಠ ಶೇ. 50 ಅಧಿಸೂಚಿತ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡುವ ಮೂಲಕ 62,635 ಕೋಟಿ ರೂಪಾಯಿಯನ್ನು ರೈತರಿಗೆ ಹೆಚ್ಚುವರಿಯಾಗಿ ನಾನು ನೀಡಲಿದ್ದೇನೆ. ಇದು ರೈತರ ಆದಾಯ ದ್ವಿಗುಣಗೊಳ್ಳಲು ನೆರವಾಗಲಿದೆ’’ ಎಂದು ಸಂಪುಟದ ಹೇಳಿಕೆ ತಿಳಿಸಿದೆ.