ಭಾರತೀಯರು ಟಿವಿಗಿಂತ ಆನ್‌ಲೈನ್ ವೀಡಿಯೊಗಳ ವೀಕ್ಷಣೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ: ಸಮೀಕ್ಷೆ
ಹೊಸದಿಲ್ಲಿ,ಅ.4: ಭಾರತೀಯರು ಈಗ ಸರಾಸರಿ ವಾರಕ್ಕೆ 8 ಗಂಟೆ 28 ನಿಮಿಷಗಳ ಕಾಲ ಆನ್‌ಲೈನ್ ವೀಡಿಯೊಗಳನ್ನು ವೀಕ್ಷಿಸುತ್ತಿದ್ದು, ಇದು ಅವರು ವಾರಕ್ಕೆ ಟಿವಿ ವೀಕ್ಷಣೆಯಲ್ಲಿ ಕಳೆಯುವ 8 ಗಂಟೆ 8 ನಿಮಿಷಕ್ಕಿಂತ ಹೆಚ್ಚಾಗಿದೆ ಎಂದು ಲೈಮ್‌ಲೈಟ್ ನೆಟ್‌ವರ್ಕ್ಸ್ ನಡೆಸಿರುವ ನೂತನ ಅಧ್ಯಯನವೊಂದು ಹೇಳಿದೆ.
ಆನ್‌ಲೈನ್ ವೀಡಿಯೊಗಳ ವೀಕ್ಷಣೆಯಲ್ಲಿ ಪ್ರತಿವಾರ ಭಾರತೀಯರು ಕಳೆಯುತ್ತಿರುವ ಸಮಯವು ಜಾಗತಿಕ ಸರಾಸರಿಯಾದ 6 ಗಂಟೆ 45 ನಿಮಿಷಗಳಿಗೆ ಹೋಲಿಸಿದರೆ ತುಂಬ ಅಧಿಕವಾಗಿದೆ. 2018ರ ಈ ಜಾಗತಿಕ ಸರಾಸರಿಯು 2016ರಲ್ಲಿ ಇದ್ದುದಕ್ಕಿಂತ ಶೇ.58ರಷ್ಟು ಏರಿಕೆಯಾಗಿದೆ ಎಂದು ‘ಸ್ಟೇಟ್ ಆಫ್ ಆನ್‌ಲೈನ್ ವೀಡಿಯೊ 2018’ ಶೀರ್ಷಿಕೆಯ ಸಮೀಕ್ಷಾ ವರದಿಯು ತಿಳಿಸಿದೆ.
ಭಾರತೀಯರು ಆನ್‌ಲೈನ್ ಚಾನೆಲ್‌ಗಳ ಮೂಲಕ ಹೆಚ್ಚಾಗಿ ಸಿನಿಮಾಗಳು,ಟಿವಿ ಕಾರ್ಯಕ್ರಮಗಳು ಮತ್ತು ಕ್ರೀಡೆ ಇತ್ಯಾದಿಗಳನ್ನು ವೀಕ್ಷಿಸುತ್ತಾರೆ ಎಂದು ಹೇಳಿದ ಲೈಮ್‌ಲೈಟ್ ನೆಟ್‌ವರ್ಕ್ಸ್‌ನ ಹಿರಿಯ ನಿರ್ದೇಶಕ (ಆಗ್ನೇಯ ಏಷ್ಯಾ ಮತ್ತು ಭಾರತ) ಜಹೀರ್ ಅಬ್ಬಾಸ್ ಅವರು,ಡಾಟಾ ಶುಲ್ಕಗಳು ಇಳಿಯುತ್ತಿರುವುದರಿಂದ ಭಾರತದಲ್ಲಿ ಆನ್‌ಲೈನ್ ವೀಡಿಯೊ ವೀಕ್ಷಣೆಯ ಜನಪ್ರಿಯತೆಯು ಇನ್ನೂ ಹೆಚ್ಚಲಿದೆ ಎಂದರು.
ಆನ್‌ಲೈನ್ ವೀಡಿಯೊ ವೀಕ್ಷಣೆಯಲ್ಲಿ ಫಿಲಿಪೀನ್ಸ್ ಅಗ್ರಸ್ಥಾನದಲ್ಲಿದ್ದರೆ ನಂತರದ ಸ್ಥಾನಗಳಲ್ಲಿ ಭಾರತ ಮತ್ತು ಅಮೆರಿಕಗಳಿವೆ. ವಾರಕ್ಕೆ ಕೇವಲ 5 ಗಂಟೆ 2 ನಿಮಿಷಗಳೊಂದಿಗೆ ಜರ್ಮನಿ ಆನ್‌ಲೈನ್ ವೀಡಿಯೊ ವೀಕ್ಷಣೆಯಲ್ಲಿ ಕಡೆಯ ಸ್ಥಾನದಲ್ಲಿದೆ 10 ದೇಶಗಳ 5,000 ಗ್ರಾಹಕರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.