ರಫೇಲ್ ಒಪ್ಪಂದ: ಸಿಬಿಐ ಮುಖ್ಯಸ್ಥರನ್ನು ಭೇಟಿಯಾಗಿ ತನಿಖೆಗೆ ಆಗ್ರಹಿಸಿದ ಪ್ರಶಾಂತ್ ಭೂಷಣ್, ಅರುಣ್ ಶೌರಿ
ಹೊಸದಿಲ್ಲಿ, ಅ. 3: ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಹಾಗೂ ಬಿಜೆಪಿಯ ಮಾಜಿ ನಾಯಕ ಅರುಣ್ ಶೌರಿ ಅವರು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಗುರುವಾರ ಭೇಟಿಯಾಗಿದ್ದಾರೆ ಹಾಗೂ ರಫೇಲ್ ಒಪ್ಪಂದದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ತಾನು ಸಿಬಿಐಯಲ್ಲಿ ದೂರು ದಾಖಲಿಸಲಿದ್ದೇನೆ ಎಂದು ಇಂದು ಬೆಳಗ್ಗೆ ಅವರು ಟ್ವೀಟ್ ಮಾಡಿದ್ದರು. 58 ಸಾವಿರ ಕೋಟಿ ರೂಪಾಯಿಯ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು 2016ರಲ್ಲಿ ಫ್ರಾನ್ಸ್‌ನೊಂದಿಗೆ ಭಾರತ ಅಂತರ್ ಸರಕಾರ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದಲ್ಲಿ ರಫೇಲ್ ವಿಮಾನಗಳಿಗೆ ನರೇಂದ್ರ ಮೋದಿ ಸರಕಾರ ಮೌಲ್ಯಕ್ಕಿಂತ ಹೆಚ್ಚು ಹಣ ನೀಡಿದೆ ಎಂದು ಕಾಂಗ್ರೆಸ್ ಸರಕಾರ ಆರೋಪಿಸುತ್ತಿದೆ. ವಿಮಾನ ನಿರ್ಮಾಣದಲ್ಲಿ ಅನುಭವ ಇಲ್ಲದ ಅನಿಲ್ ಅಂಬಾನಿ ಅವರ ಸಂಸ್ಥೆಗೆ ಗುತ್ತಿಗೆ ನೀಡುವ ಮೂಲಕ ಅನಿಲ್ ಅಂಬಾನಿ ಅವರಿಗೆ ಸರಕಾರ ನೆರವು ನೀಡಿದೆ ಎಂದು ಕೂಡ ಕಾಂಗ್ರೆಸ್ ಆರೋಪಿಸಿದೆ.
ರಫೇಲ್ ಹಗರಣದ ಕುರಿತು ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಬಿಜೆಪಿಯ ಮಾಜಿ ನಾಯಕ ಯಶ್ವಂತ್ ಸಿನ್ಹಾ ಹಾಗೂ ತಮ್ಮ ಪರವಾಗಿ ದೂರು ಸಲ್ಲಿಸಲು ಇಂದು 4 ಗಂಟೆಗೆ ತಾವು ಸಿಬಿಐ ನಿರ್ದೇಶಕರನ್ನು ಭೇಟಿಯಾಗಲಿದ್ದೇವೆ ಎಂದು ಶೌರಿ ಇಂದು ಬೆಳಗ್ಗೆ ಹೇಳಿದ್ದರು.
ರಫೇಲ್ ಒಪ್ಪಂದ ದೇಶದ ಭದ್ರತೆಯನ್ನು ಅಪಾಯಕ್ಕೆ ಒಡ್ಡಿದೆ ಎಂದು ಆಗಸ್ಟ್ 8ರಂದು ಭೂಷಣ್, ಸಿನ್ಹಾ ಹಾಗೂ ಶೌರಿ ಬಿಡುಗಡೆ ಮಾಡಿದ ಸಂಯುಕ್ತ ಹೇಳಿಕೆ ಆರೋಪಿಸಿತ್ತು.