ವಿಪಕ್ಷಗಳ ಮಹಾಮೈತ್ರಿ ಪ್ರಯೋಗ ವಿಫಲವಾಗಲಿದೆ: ಅರುಣ್ ಜೇಟ್ಲಿ

Update: 2018-10-06 14:33 GMT

ಹೊಸದಿಲ್ಲಿ, ಅ.6: ವಿಪಕ್ಷಗಳ ಮಹಾಮೈತ್ರಿ ಎಂಬುದು ಒಂದು ಸಂಯುಕ್ತ ಅರಾಜಕತೆಯಾಗಿದೆ ಎಂದು ಲೇವಡಿ ಮಾಡಿರುವ ವಿತ್ತಸಚಿವ ಅರುಣ್ ಜೇಟ್ಲಿ, ಇದರ ಪ್ರಯೋಗಾರ್ಥ ಪರೀಕ್ಷೆ ದೇಶದಲ್ಲಿ ಹಲವಾರು ಬಾರಿ ವಿಫಲವಾಗಿದೆ ಎಂದು ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ಆಯೋಜಿಸಲಾಗಿರುವ ‘ಹಿಂದುಸ್ತಾನ್ ಟೈಮ್ಸ್’ ನಾಯಕತ್ವ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಅವರು, ಮಹಾಮೈತ್ರಿಯಿಂದ ಅಸ್ಥಿರತೆ ನೆಲೆಸುತ್ತದೆ. ಪಕ್ಷಗಳ ಸಿದ್ಧಾಂತಗಳನ್ನು ಬಲಿಗೊಟ್ಟು ರೂಪಿಸುವ ಮಹಾಮೈತ್ರಿ ಸರಕಾರ ಕೆಲವೇ ತಿಂಗಳು ಬಾಳುತ್ತದೆ ಎಂದರು.

ಬ್ಯಾಂಕ್‌ಗಳ ಎನ್‌ಪಿಎ(ಅನುತ್ಪಾದಕ ಆಸ್ತಿ)ಯ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿರುವ ಟೀಕೆಗಳನ್ನು ಪ್ರಸ್ತಾವಿಸಿದ ಜೇಟ್ಲಿ, ಇಂತಹ ವಿಷಯಗಳನ್ನು ಅರಿತುಕೊಳ್ಳುವಷ್ಟು ರಾಹುಲ್ ಪ್ರಬುದ್ಧರಾಗಿಲ್ಲ. ಎನ್‌ಪಿಎ ಬಗ್ಗೆ ಸ್ವಲ್ಪ ಅರಿತುಕೊಂಡು ಆ ಬಳಿಕ ಸಾರ್ವಜನಿಕ ಸಂವಾದಕ್ಕೆ ಮುಂದಾಗುವುದು ಒಳಿತು . ಘೋಷಣೆ ಮೊಳಗಿಸುವ ಮೊದಲು ವಿಷಯ ಏನೆಂಬುದನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕು ಎಂದು ಸಲಹೆ ಮಾಡಿದರು. ಎನ್‌ಪಿಎ ಎಂದರೆ ಸಾಲಮನ್ನಾ ಎಂದು ಬಹುಷಃ ರಾಹುಲ್ ತಿಳಿದಿರಬೇಕು ಎಂದು ಲೇವಡಿ ಮಾಡಿದ ಅವರು, ಈ ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಬೇಕಾಬಿಟ್ಟಿ ಸಾಲ ನೀಡಿರುವುದು ಈಗಿನ ಎನ್‌ಪಿಎ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ ಎಂದರು.

ಎನ್‌ಡಿಎ ಅಧಿಕಾರಕ್ಕೆ ಬಂದಾಗ ದಾಖಲೆಪತ್ರಗಳಲ್ಲಿ ಎನ್‌ಪಿಎಯ ಮೊತ್ತ 2.5 ಲಕ್ಷ ಕೋಟಿ ರೂ. ಎಂದು ನಮೂದಿಸಲಾಗಿತ್ತು. ಆದರೆ ವಾಸ್ತವದಲ್ಲಿ ಇದು 8.5 ಲಕ್ಷ ಕೋಟಿ ರೂ. ಆಗಿತ್ತು ಎಂದು ಜೇಟ್ಲಿ ತಿಳಿಸಿದರು. ತಾನು ಮೈತ್ರಿಕೂಟಕ್ಕೆ ವಿರೋಧವಾಗಿಲ್ಲ. ಆದರೆ ಮಹಾಮೈತ್ರಿಯ ಪ್ರಮುಖ ಪಕ್ಷ ಪ್ರಬಲವಾಗಿದ್ದರೆ ಮಾತ್ರ ಮಹಾಮೈತ್ರಿ ಬಾಳುತ್ತದೆ. ಇದಕ್ಕೆ ಈ ಹಿಂದಿನ ವಾಜಪೇಯಿ ನೇತೃತ್ವದ ಸರಕಾರ(ಬಿಜೆಪಿ 183 ಸಂಸದರನ್ನು ಹೊಂದಿತ್ತು) ಹಾಗೂ ಈಗಿನ ಮೋದಿ ನೇತೃತ್ವದ ಸರಕಾರ(ಬಿಜೆಪಿ 282 ಸಂಸದರನ್ನು ಹೊಂದಿದೆ) ಸ್ಪಷ್ಟ ಉದಾಹರಣೆಯಾಗಿದೆ . ಈ ಹಿನ್ನೆಲೆಯಲ್ಲಿ ಗಮನಿಸಿದರೆ 2019ರ ಚುನಾವಣೆ ಸುಸಂಬದ್ಧ ಕಾರ್ಯನೀತಿ ಮತ್ತು ಬಲಿಷ್ಟನಾಯಕನನ್ನು ಹೊಂದಿರುವ ಸ್ಥಿರ ಸರಕಾರ ಮತ್ತು ಸಂಪೂರ್ಣ ಅರಾಜಕತೆಯ ಒಕ್ಕೂಟದ ನಡುವಿನ ಆಯ್ಕೆಯಾಗಿದೆ ಎಂದರು. ಈ ಹಿಂದೆ ಕ್ಷಿಪ್ರವಾಗಿ ಅಭಿವೃದ್ಧಿ ಹೊಂದುವ ಹಲವು ಅವಕಾಶಗಳನ್ನು ದೇಶ ವ್ಯರ್ಥವಾಗಿಸಿದೆ. ಆದರೆ ಇನ್ನು ವ್ಯರ್ಥವಾಗಿಸಲು ಬಿಡುವುದಿಲ್ಲ ಎಂದು ಎನ್‌ಡಿಎ ಸರಕಾರ ಪಣತೊಟ್ಟಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News