ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ಸರಕಾರ ಬದ್ಧ: ಸಿಎಂ ಕುಮಾರಸ್ವಾಮಿ

Update: 2018-10-06 14:57 GMT

ಹೊಸದಿಲ್ಲಿ, ಅ. 6: ಬೆಂಗಳೂರು ನಗರದ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿದ್ದು, ಇನ್ನೊಂದು ತಿಂಗಳೊಳಗಾಗಿ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಇಂದಿಲ್ಲಿ ಪ್ರಕಟಿಸಿದ್ದಾರೆ.

ಶನಿವಾರ ಹೊಸದಿಲ್ಲಿಯಲ್ಲಿ ಹಿಂದೂಸ್ತಾನ್ ಟೈಮ್ಸ್ ಲೀಡರ್ ಶಿಪ್ ಸಮಿಟ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನ ಮೂಲಸೌಕರ್ಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಇನ್ನು ನಾಲ್ಕೈದು ತಿಂಗಳಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದರು.

ನಮ್ಮ ಮೆಟ್ರೋ ಕಾಮಗಾರಿ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲಿದ್ದೇವೆ. ಆದರೆ, ಇದೊಂದರಿಂದಲೇ ಸಂಚಾರ ದಟ್ಟಣೆ ಪರಿಹಾರ ಸಾಧ್ಯವಿಲ್ಲ. ಇದನ್ನು ಅರಿತ ನಮ್ಮ ಸರಕಾರ ಎಲೆವೇಟೆಡ್ ಕಾರಿಡಾರ್ ನಿರ್ಮಿಸಲು ಉದ್ದೇಶಿಸಿದೆ. ಆದರೆ, ಇದಕ್ಕೆ ವಿರೋಧವಿದೆ. ಎಲ್ಲರ ಮನವೊಲಿಸಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ನಮ್ಮ ಸರಕಾರ ಸುಗಮ ಸಂಚಾರ, ಮಾಲಿನ್ಯ ನಿಯಂತ್ರಣ ಮತ್ತು ಎಲ್ಲ ರೀತಿಯ ಸಮಸ್ಯೆಗಳ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

ಕೇಂದ್ರ, ರಾಜ್ಯ ಸರಕಾರಗಳಿಗೆ ಹೆಚ್ಚಿನ ಅನುದಾನ ನೀಡುವ ಅಗತ್ಯವಿದೆ ಎಂದ ಅವರು, ಇಂಧನ ಬೆಲೆಯನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದರಿಂದ ಸಮಸ್ಯೆಗೆ ಪರಿಹಾರ ದೊರೆಯಲಾರದು. ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಸಂವಿಧಾನದತ್ತವಾದ ಕೆಲವು ಅಧಿಕಾರಗಳನ್ನು ಹಿಂಪಡೆಯುತ್ತಿದೆ. ಇದು ಸರಿಯಲ್ಲ ಎಂದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿನ ಮೈತ್ರಿ ಸರಕಾರ ಸುಭದ್ರವಾಗಿದ್ದು, ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಸಮನ್ವಯದಿಂದ ಆಡಳಿತ ನಡೆಸುತ್ತಿದ್ದೇವೆ. ಐದು ವರ್ಷ ಅವಧಿ ಪೂರ್ಣ ಗೊಳಿಸುವ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಿಎನ್‌ಎನ್ ನ್ಯೂಸ್-18 ಉಪ ಪ್ರಧಾನ ಸಂಪಾದಕ ಆನಂದ್ ನರಸಿಂಹನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News