×
Ad

ಟ್ರಂಪ್ ಗೆ ವಿಷದ ಪತ್ರ!

Update: 2018-10-06 22:07 IST

ವಾಶಿಂಗ್ಟನ್, ಅ. 6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್, ಎಫ್‌ಬಿಐ ನಿರ್ದೇಶಕ ಮತ್ತು ಓರ್ವ ಅಡ್ಮಿರಲ್‌ಗೆ ಕ್ಯಾಸ್ಟರ್ ಬೀನ್‌ಗಳನ್ನು ಒಳಗೊಂಡ ಪತ್ರಗಳನ್ನು ಕಳುಹಿಸಿರುವ ಅಮೆರಿಕ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ವಿರುದ್ಧ ಈ ವ್ಯಕ್ತಿಗಳಿಗೆ ಬೆದರಿಕೆ ಒಡ್ಡಿದ ಆರೋಪವನ್ನು ಹೊರಿಸಲಾಗಿದೆ.

ಕ್ಯಾಸ್ಟರ್ ಬೀನ್‌ಗಳಿಂದ ‘ರಿಸಿನ್’ ಎಂಬ ಮಾರಕ ವಿಷವನ್ನು ತಯಾರಿಸಲಾಗುತ್ತದೆ.

ನೌಕಾಪಡೆ ಅಧಿಕಾರಿ ವಿಲಿಯಮ್ ಕ್ಲೈಡ್ ಅಲನ್ ವಿರುದ್ಧ ಸಾಲ್ಟ್ ಲೇಕ್ ಸಿಟಿಯ ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಜೈವಿಕ ವಿಷವನ್ನು ಆಯುಧವಾಗಿ ಬಳಸುವ ಬೆದರಿಕೆಯೊಡ್ಡಿದ ಒಂದು ಆರೋಪ ಹಾಗೂ ಬೆದರಿಕೆಯ ಸಂದೇಶಗಳನ್ನು ಕಳುಹಿಸಿದ ನಾಲ್ಕು ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ.

ಆರೋಪಗಳು ಸಾಬೀತಾದರೆ, 39 ವರ್ಷದ ಅಲನ್ ಜೀವಾವಧಿ ಜೈಲು ಶಿಕ್ಷೆಯನ್ನು ಎದುರಿಸಬಹುದಾಗಿದೆ ಎಂದು ಸಾಲ್ಟ್ ಲೇಕ್ ಸಿಟಿಯಲ್ಲಿರುವ ಅಟಾರ್ನಿ ಕಚೇರಿಯ ವಕ್ತಾರೆಯೊಬ್ಬರು ತಿಳಿಸಿದರು.

ಅವರು ಟ್ರಂಪ್, ಮ್ಯಾಟಿಸ್, ಎಫ್‌ಬಿಐ ನಿರ್ದೇಶಕ ಕ್ರಿಸ್ಟೋಫರ್ ರೇ ಮತ್ತು ಅಡ್ಮಿರಲ್ ಜಾನ್ ರಿಚರ್ಡ್‌ಸನ್‌ಗೆ ಪ್ರತ್ಯೇಕ ಲಕೋಟೆಗಳಲ್ಲಿ ಹುಡಿ ಮಾಡಿದ ಕ್ಯಾಸ್ಟರ್ ಬೀಜಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

 ಆದರೆ, ಯಾವುದೇ ಪತ್ರವು ಅವುಗಳ ಉದ್ದೇಶಿತ ವ್ಯಕ್ತಿಗಳಿಗೆ ತಲುಪಿಲ್ಲ ಹಾಗೂ ಯಾರೂ ಗಾಯಗೊಂಡಿಲ್ಲ.

 ಅಲನ್ ಅಮೆರಿಕ ನೌಕಾಪಡೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಬಳಿಕ, 2002ರಲ್ಲಿ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News