×
Ad

ವಕೀಲರ ಮುಷ್ಕರದ ಮೇಲಿನ ನಿಷೇಧ ತೆರವಿಗೆ ಸಿಜೆಐ ನಕಾರ

Update: 2018-10-06 23:18 IST

ಹೊಸದಿಲ್ಲಿ, ಅ.6: ವಕೀಲರು ಮುಷ್ಕರ ನಡೆಸುವುದರ ಮೇಲೆ 16 ವರ್ಷಗಳ ಹಿಂದೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಬೇಕೆಂದು ಸುಪ್ರೀಂಕೋರ್ಟ್ ವಕೀಲರ ಸಂಘ ಮಾಡಿರುವ ಸಲಹೆಯನ್ನು ಒಪ್ಪದ ಸಿಜೆಐ ರಂಜನ್ ಗೊಗೊಯಿ, ವಕೀಲರು ಮುಷ್ಕರ ನಡೆಸುವುದಾದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.

ನೂತನ ಸಿಜೆಐ ಆಗಿ ನೇಮಕಗೊಂಡ ಗೊಗೊಯಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ)ದ ಆಶ್ರಯದಲ್ಲಿ ನಡೆದಿದ್ದು ಈ ಸಂದರ್ಭ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರ ಈ ವಿಷಯವನ್ನು ಎತ್ತಿದರು.

ವಕೀಲರ ಬಾಯನ್ನು ಮುಚ್ಚಿಸಿದರೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯೇ ನಾಶವಾಗಬಹುದು. ನಮ್ಮ ಸ್ವಾತಂತ್ರವನ್ನು ಮರುಸ್ಥಾಪಿಸಲಿದ್ದೀರಿ ಎಂಬ ವಿಶ್ವಾಸವಿದೆ ಎಂದು ಮಿಶ್ರ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಇದೊಂದು ವಿಷಯವೇ ಅಲ್ಲ ಎಂಬುದು ನನ್ನ ಭಾವನೆ. ಮುಷ್ಕರ ನಡೆಸುವ ಅಗತ್ಯವೇ ಇಲ್ಲ ಎಂಬುದು ತನಗಂತೂ ಖಚಿತವಾಗಿದೆ ಎಂದರು. ಸಿಜೆಐ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಅರುಣ್ ಮಿಶ್ರಾ, ವಕೀಲರು ಮುಷ್ಕರದ ಕಾರಣದಿಂದ ನ್ಯಾಯಾಲಯಕ್ಕೆ ಗೈರು ಹಾಜರಾದರೆ ಜನತೆ ತಮ್ಮ ಸ್ವಾತಂತ್ರ ಮತ್ತು ಹಕ್ಕನ್ನು ಕಳೆದುಕೊಂಡಂತಾಗುತ್ತದೆ ಎಂದರು.

ಪ್ರಜಾಪ್ರಭುತ್ವಕ್ಕೆ ಅಪಾಯ ಎದುರಾದರೆ ಅಥವಾ ನ್ಯಾಯಾಂಗ ವ್ಯವಸ್ಥೆಯನ್ನು ರಕ್ಷಿಸುವ ವಿಶೇಷ ಸಂದರ್ಭ ಎದುರಾದಾಗ ವಕೀಲರು ಮುಷ್ಕರ ನಡೆಸಬಹುದು. ಇತರ ಸಂದರ್ಭಗಳಲ್ಲಿ ಅಗತ್ಯವಿಲ್ಲ ಎಂದು ಮಿಶ್ರಾ ಹೇಳಿದರು. ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಎನ್‌ವಿ ರಮಣ ಮತ್ತು ಮೋಹನ್ ಎಂ.ಶಾಂತನಗೌಡರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಕೀಲರು ಮುಷ್ಕರ ನಡೆಸಬಾರದು ಎಂದು ಸುಪ್ರೀಂಕೋರ್ಟ್ 2002ರ ತೀರ್ಪಿನಲ್ಲಿ ಸೂಚಿಸಿತ್ತು. ದೇಶದಲ್ಲಿ ವಿಚಾರಣಾಧೀನ ಖೈದಿಗಳ ಸಂಖ್ಯೆ ಹೆಚ್ಚಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿಜೆಐ ಗೊಗೊಯಿ, ದೇಶದ ಯುವಜನಾಂಗದ ಗಮನಾರ್ಹ ಪ್ರಮಾಣ ಜೈಲಿನಲ್ಲಿದೆ ಎಂದರು. ಖೈದಿಗಳಲ್ಲಿ ಶೇ.67ರಷ್ಟು ವಿಚಾರಣಾಧೀನ ಖೈದಿಗಳಾಗಿದ್ದು, ಇವರಲ್ಲಿ ಶೇ.47ರಷ್ಟು 18ರಿಂದ 30 ವರ್ಷದೊಳಗಿನವರು ಎಂದು ಸಿಜೆಐ ಕಳವಳ ವ್ಯಕ್ತಪಡಿಸಿದರು.

ಈ ಶೇ.67 ವಿಚಾರಣಾಧೀನ ಖೈದಿಗಳಲ್ಲಿ ಶೇ.66ರಷ್ಟು ಪರಿಶಿಷ್ಟ ಜಾತಿಯವರು. 10ನೇ ತರಗತಿಗಿಂತ ಕಡಿಮೆ ವಿದ್ಯಾಭ್ಯಾಸ ಪಡೆದವರು ಶೇ.71, ಅವಿದ್ಯಾವಂತರು ಶೇ.28ರಷ್ಟು ಎಂದು ಅವರು ವಿವರಿಸಿದರು. ಅಗತ್ಯವಿದ್ದವರಿಗೆ ಏನಾದರೂ ಸಹಾಯ ಮಾಡುವುದೇ ಕಾನೂನು ನೆರವು ಕಾರ್ಯಕ್ರಮ. ವಕೀಲರಲ್ಲಿ ಇಂತಹ ಭಾವನೆ ಬೆಳೆಸಲು ಬಿಸಿಐ ಮುಂದಾಗಬೇಕು ಎಂದು ಸಿಜೆಐ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News