53 ವರ್ಷದ ಬಾಲಾಪರಾಧಿಗೆ ಆಸ್ಪತ್ರೆ ಶುಚಿಗೊಳಿಸುವ ಶಿಕ್ಷೆ !

Update: 2018-10-07 03:31 GMT

ಪಿಲಿಭಿಟ್, ಅ. 7: ಉತ್ತರ ಪ್ರದೇಶದ ಪಿಲಿಭಿಟ್ ಬಾಲನ್ಯಾಯ ಮಂಡಳಿ ಶನಿವಾರ ತೀರಾ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಯಿತು. ಸಾಮಾನ್ಯವಾಗಿ ಕಾನೂನು ಮಾರ್ಗ ಬಿಟ್ಟ ಹದಿಹರೆಯದ ಯುವಕರಿಂದ ತುಂಬಿರುವ ಈ ಆವರಣದಲ್ಲಿ, 53 ವರ್ಷದ ವ್ಯಕ್ತಿಯೊಬ್ಬ ತನ್ನ ಸರದಿಗಾಗಿ ಕಾಯುತ್ತಿದ್ದ. ಬಹುಶಃ ಆತ ಅತ್ಯಂತ ಹಿರಿಯ ಬಾಲಾಪರಾಧಿ !

ಬಾಲನ್ಯಾಯಮಂಡಳಿಯ ಹುಕುಂ ಜಾರಿ ಅಧಿಕಾರಿ ಆತನ ಹೆಸರು ಕರೆದರು. ಇದಕ್ಕಾಗಿ ಆತ 38 ವರ್ಷಗಳಿಂದ ಕಾಯುತ್ತಿದ್ದ. 1980ರಲ್ಲಿ ನಡೆದ ಹತ್ಯೆ ಆರೋಪದಲ್ಲಿ ಸುಧಾರಣಾಗೃಹ ಸೇರಿದ್ದ ಈತನಿಗೆ ಮಂಡಳಿ ಜಿಲ್ಲಾ ಆಸ್ಪತ್ರೆ ಹಾಗೂ ಮರಣೋತ್ತರ ಪರೀಕ್ಷೆ ಕೇಂದ್ರವನ್ನು ಮೂರು ವರ್ಷಗಳ ಕಾಲ ಸ್ವಚ್ಛಗೊಳಿಸುವ ಶಿಕ್ಷೆ ಘೋಷಿಸಿತು.

15ನೇ ವರ್ಷದಲ್ಲಿದ್ದಾಗ ತನ್ನ ಅಜ್ಜನ ಜತೆ ಜಗಳವಾಡುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬನನ್ನು ಇರಿದು ಕೊಲೆ ಮಾಡಿದ್ದ ಆರೋಪ ಈತನ ಮೇಲಿತ್ತು. ಈ ಘಟನೆ ನಡೆದದ್ದು 1980ರ ಡಿಸೆಂಬರ್ 11ರಂದು. ತೀವ್ರವಾಗಿ ಇರಿತದ ಗಾಯಕ್ಕೆ ಒಳಗಾದ ವ್ಯಕ್ತಿ ಒಂಬತ್ತು ದಿನ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.

ಆರೋಪಿಯನ್ನು ವಯಸ್ಕನನ್ನಾಗಿ ಪರಿಗಣಿಸಿ ವಿಚಾರಣೆ ನಡೆಸಲಾಯಿತು. 1982ರಲ್ಲಿ ಸ್ಥಳೀಯ ನ್ಯಾಯಾಲಯ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಐದೂವರೆ ತಿಂಗಳು ಜೈಲುವಾಸ ಅನುಭವಿಸಿದ ಬಳಿಕ ಈತನಿಗೆ ಜಾಮೀನು ಸಿಕ್ಕಿತ್ತು. ಜೈಲಿನಿಂದ ಹೊರಬಂದ ಬಳಿಕ ತರಕಾರಿ ಮಾರಾಟ ಮಾಡುತ್ತಿದ್ದ. ಮೂರು ವರ್ಷ ಬಳಿಕ ವಿವಾಹವಾಗಿ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಹೊಂದಿದ. ಮಕ್ಕಳು ಉತ್ತಮ ಹುದ್ದೆಗಳಲ್ಲಿದ್ದು, ಒಬ್ಬ ಸೌದಿ ಅರೇಬಿಯಾದಲ್ಲಿದ್ದಾನೆ.

ಈ ಮಧ್ಯೆ ಈತನ ಕಡತ ಹಲವು ನ್ಯಾಯಾಲಯಗಳನ್ನು ಸುತ್ತಿತ್ತು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಈತನನ್ನು ಬಾಲಾಪರಾಧಿಯಾಗಿ ಪರಿಗಣಿಸಿ ವಿಚಾರಣೆ ನಡೆಸುವಂತೆ 2012ರಲ್ಲಿ ಹೈಕೋರ್ಟ್, ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿತು. ಈ ಆಧಾರದಲ್ಲಿ ಬಾಲನ್ಯಾಯ ಮಂಡಳಿಗೆ ಪ್ರಕರಣ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News