ಉಪ ಚುನಾವಣೆ : ಬಿ.ಎಸ್.ವೈ. ಪುತ್ರ ಬಿ.ವೈ.ರಾಘವೇಂದ್ರ ಸ್ಪರ್ಧೆಗೆ ದೆಹಲಿ ವರಿಷ್ಠರ ಗ್ರೀನ್ ಸಿಗ್ನಲ್!

Update: 2018-10-07 14:54 GMT

ಶಿವಮೊಗ್ಗ, ಅ. 7: ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೆ, ಸ್ಥಳೀಯ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಕಣಕ್ಕಿಳಿಯುವ ಅಭ್ಯರ್ಥಿಗಳ್ಯಾರೆಂಬ ಚರ್ಚೆಗಳು ನಡೆಯಲಾರಂಭಿಸಿವೆ. ಈ ನಡುವೆ ಬಿಜೆಪಿ ಎದುರು, ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಕಣಕ್ಕಿಳಿಯುವುದು ಖಚಿತವಾಗಿದೆ. ಇದು ಸಾಕಷ್ಟು ಕುತೂಹಲ ಮೂಡಿಸಿದೆ. 
ನಿರೀಕ್ಷಿಸಿದಂತೆ ಬಿಜೆಪಿಯಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ, ದೆಹಲಿಯ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದಿಕೃತ ಘೋಷಣೆಯಷ್ಟೆ ಬಾಕಿಯಿದೆ ಎಂದು ಆ ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ. 

ತಣ್ಣಾಗದ ಲಾಬಿ: 2019 ರಲ್ಲಿ ಎದುರಾಗುವ ಸಾರ್ವತ್ರಿಕ ಚುನಾವಣೆ ಮೇಲೆ ಕಣ್ಣಿಟ್ಟು, ಬಿಜೆಪಿ ಕೆಲ ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಇದರಿಂದ ಬಿ.ವೈ.ರಾಘವೇಂದ್ರಗೆ ಟಿಕೆಟ್ ಸುಲಭವಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಮತ್ತೊಂದೆಡೆ ಕೆ.ಎಸ್.ಈಶ್ವರಪ್ಪ ಕೂಡ ಬಿ.ವೈ.ರಾಘವೇಂದ್ರ ಜೊತೆಗೆ ಇನ್ನೂ ಕೆಲ ನಾಯಕರು ಟಿಕೆಟ್ ರೇಸ್‍ನಲ್ಲಿದ್ದಾರೆ ಎಂದು ಹೇಳುವ ಮೂಲಕ, ಹೊಸ ಚರ್ಚೆ ಹುಟ್ಟು ಹಾಕಿದ್ದರು. 
ಆದರೆ ದಿಢೀರ್ ಆಗಿ ಉಪ ಚುನಾವಣೆ ಎದುರಾಗಿರುವುದು, ಬಿಜೆಪಿ ಸ್ಪರ್ಧಾಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿದೆ. ನಾಲ್ಕೈದು ತಿಂಗಳಲ್ಲಿಯೇ ಸಾರ್ವತ್ರಿಕ ಚುನಾವಣೆ ಎದುರಾಗುತ್ತಿರುವುದು ಸ್ಪರ್ಧಾಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗಾಗುವಂತೆ ಮಾಡಿದೆ. ಹಾಗೆಯೇ ಬಿ.ಎಸ್.ಯಡಿಯೂರಪ್ಪ ಎದುರು ಟಿಕೆಟ್ ಲಾಬಿ ನಡೆಸುವುದು ಅಷ್ಟು ಸುಲಭವಲ್ಲ ಎಂಬ ಕಾರಣದಿಂದ, ಕೆಲ ಆಕಾಂಕ್ಷಿಗಳು ಟಿಕೆಟ್ ರೇಸ್‍ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಬಿ.ವೈ.ರಾಘವೇಂದ್ರಗೆ ನಿರಾಯಾಸವಾಗಿ ಟಿಕೆಟ್ ಲಭಿಸುವುದು ನಿಶ್ಚಿತವಾಗಿದೆ. 

ಮೈತ್ರಿ ಅಭ್ಯರ್ಥಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 7 ಕಡೆ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಕಾಂಗ್ರೆಸ್ ಕೇವಲ 1 ಕಡೆ ವಿಜಯ ಸಂಪಾದಿಸಿದ್ದರೆ, ಜೆಡಿಎಸ್ ಸಾಧನೆ ಶೂನ್ಯವಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಈ ಎರಡು ಪಕ್ಷಗಳು ಹೇಳ ಹೆಸರಿಲ್ಲದಂತೆ ಧೂಳೀಪಟವಾಗಿದ್ದವು.

ಇದಾದ ನಂತರ ವಿಧಾನ ಪರಿಷತ್‍ನ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಚುನಾವಣೆಗಳಲ್ಲಿ, ಕ್ರಮವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತಲಾ ಒಂದೊಂದು ಸ್ಥಾನದಲ್ಲಿ ಜಯ ಸಾಧಿಸಿವೆ. ಕಾಂಗ್ರೆಸ್ ತೀವ್ರ ಮುಖಭಂಗಕ್ಕೀಡಾಗಿತ್ತು. ಇತ್ತೀಚೆಗೆ ನಡೆದ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್-ಜೆಡಿಎಸ್ ನೆಲಕಚ್ಚಿದ್ದವು. 

ಈ ಎಲ್ಲ ಅಂಶ ಗಮನಿಸಿದರೆ, ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಿದೆ. ಈ ಕಾರಣದಿಂದ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಲೋಕಸಭೆ ಉಪ ಚುನಾವಣೆ ಅಷ್ಟು ಸುಲಭದ ತುತ್ತಲ್ಲವಾಗಿದೆ. ಈ ವಿಷಯವನ್ನು ಮನಗಂಡಿರುವ ಎರಡೂ ಪಕ್ಷಗಳ ನಾಯಕರು ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸುತ್ತಿದ್ದು, ಜೆಡಿಎಸ್ ಬೆಂಬಲಿಸಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಹಂತದ ನಾಯಕರು ಚರ್ಚೆ ನಡೆಸುತ್ತಿದ್ದಾರೆ. 

ಹುರಿಯಾಳು ಯಾರು?: ಕಾಂಗ್ರೆಸ್‍ನಿಂದ ಕಣಕ್ಕಿಳಿಯುವ ಅಭ್ಯರ್ಥಿ ಯಾರೆಂಬುವುದು ಇಲ್ಲಿಯವರೆಗೂ ಸ್ಪಷ್ಟವಾಗುತ್ತಿಲ್ಲ. ಆದರೆ ಹಲವು ನಾಯಕರು ತೆರೆಮರೆಯಲ್ಲಿ ಟಿಕೆಟ್‍ಗೆ ಲಾಬಿ ನಡೆಸಲಾರಂಭಿಸಿದ್ದಾರೆ. ಸದ್ಯದ ಆ ಪಕ್ಷದ ವಿದ್ಯಮಾನ ಗಮನಿಸಿದರೆ ಕಳೆದ ಬಾರಿ ಕಣಕ್ಕಿಳಿದಿದ್ದ ಕೆಪಿಸಿಸಿ ಉಪಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಸಚಿವರುಗಳಾದ ಕಾಗೋಡು ತಿಮ್ಮಪ್ಪ, ಸಚಿವ ಕಿಮ್ಮನೆ ರತ್ನಾಕರ್ ಹೆಸರುಗಳು ಪ್ರಮುಖವಾಗಿ ಕೇಳಿಬರಲಾರಂಭಿಸಿವೆ. 
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಗರ ಕ್ಷೇತ್ರದಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ 88 ವರ್ಷ ಪ್ರಾಯದ ಕಾಗೋಡು ತಿಮ್ಮಪ್ಪರವರು, ಲೋಕಸಭೆ ಚುನಾವಣೆ ಸ್ಪರ್ಧೆಗೆ ಟಿಕೆಟ್ ಕೇಳಿಲ್ಲ. ಎಲ್ಲ ರೀತಿಯ ಚುನಾವಣಾ ರಾಜಕಾರಣದಿಂದ ಅವರು ದೂರ ಉಳಿಯುವ ಸಾಧ್ಯತೆಗಳಿರುವ ಕಾರಣದಿಂದ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆಂಬುವುದೆಲ್ಲ ವದಂತಿಯಾಗಿದೆ ಎಂದು ಅವರ ಆಪ್ತ ಮೂಲಗಳು ಮಾಹಿತಿ ನೀಡುತ್ತವೆ. 

   (ಮಂಜುನಾಥ ಭಂಡಾರಿ, ಕಿಮ್ಮನೆ ರತ್ನಾಕರ್)

ಇದರಿಂದ ಮಂಜುನಾಥ ಭಂಡಾರಿ ಹಾಗೂ ಕಿಮ್ಮನೆ ರತ್ನಾಕರ್ ರವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬರುತ್ತಿವೆ. ಇವರಿಬ್ಬರಲ್ಲಿ ಓರ್ವರಿಗೆ ಟಿಕೆಟ್ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಈರ್ವರು ನಾಯಕರು ಚುನಾವಣೆ ಸ್ಪರ್ಧೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಅದಿಕೃತವಾಗಿ ಏನನ್ನೂ ಹೇಳದಿರುವುದು, ಪಕ್ಷದ ಪಾಳೇಯದಲ್ಲಿ ಕುತೂಹಲದ ಜೊತೆಗೆ ಗೊಂದಲ ಕೂಡ ಉಂಟು ಮಾಡಿದೆ.

ವರದಿ ಕೇಳಿದ ರಾಹುಲ್‍ಗಾಂಧಿ!
2019 ರ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಮೀಪದಲ್ಲಿಯೇ ರಾಜ್ಯದ ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಗೆ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿದೆ. ಈ ಉಪ ಚುನಾವಣೆಯ ಫಲಿತಾಂಶ ಸಾರ್ವತ್ರಿಕ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ. ಈ ಕಾರಣದಿಂದ ಶತಾಯಗತಾಯ ಉಪ ಚುನಾವಣೆಯಲ್ಲಿ ಪ್ರಾಬಲ್ಯ ಮೆರೆಯಲು ವಿಶೇಷವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ. 

ಈ ಕಾರಣದಿಂದಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮೂರು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಸಾಧ್ಯತೆ? ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡರೆ ಪಕ್ಷಕ್ಕಾಗುವ ಲಾಭ? ಯಾವ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಿದರೆ ಮತಗಳಿಕೆಗೆ ಸಹಕಾರಿಯಾಗಲಿದೆ? ಎಂಬಿತ್ಯಾದಿ ಸಮಗ್ರ ವರದಿ ಸಿದ್ದಪಡಿಸಿ ಕಳುಹಿಸುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ ಎಂದು ಆ ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡುತ್ತವೆ. 

ಕಣಕ್ಕಿಳಿಯದಿರಲು ಮಧು ಬಂಗಾರಪ್ಪ-ಗೀತಾ ಶಿವರಾಜ್‍ಕುಮಾರ್ ನಿರ್ಧಾರ?
ಉಪ ಚುನಾವಣೆಯಲ್ಲಿ ದಿವಂಗತ ಎಸ್.ಬಂಗಾರಪ್ಪ ಕುಟುಂಬಕ್ಕೆ ಸೇರಿದವರ್ಯಾರದರು ಕಣಕ್ಕಿಳಿಯಲಿದ್ದಾರಾ? ಎಂಬ ಚರ್ಚೆಗಳು ಸ್ಥಳೀಯ ರಾಜಕೀಯ ವಲಯದಲ್ಲಿ ಬಿರುಸಿನಿಂದ ನಡೆಯಲಾರಂಭಿಸಿವೆ. 2014 ರಲ್ಲಿ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ, ಶಿವಮೊಗ್ಗ ಕ್ಷೇತ್ರವನ್ನು ಬಿಜೆಪಿ ಪಕ್ಷ ವಶಕ್ಕೆ ಪಡೆದಿತ್ತು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರವರು 3,63,305 ಮತಗಳ ಭಾರೀ ಅಂತರದಲ್ಲಿ ಜಯಗಳಿಸಿದ್ದರು. ಇವರ ಎದುರು ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದ ಮಾಜಿ ಸಿಎಂ, ದಿವಂಗತ ಎಸ್.ಬಂಗಾರಪ್ಪರ ಪುತ್ರಿ ಗೀತಾ ಶಿವರಾಜ್‍ಕುಮಾರ್‍ರವರು ಸಾಕಷ್ಟು ಕುತೂಹಲ ಕೆರಳಿಸಿದ್ದರು. ಕೆಲ ಸಮೀಕ್ಷೆಗಳು ಅವರ ಗೆಲ್ಲುವ ಸಾಧ್ಯತೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದವು. 
ಆದರೆ ಬಿ.ಎಸ್.ಯಡಿಯೂರಪ್ಪ ಎದುರು ಗೀತಾ ಶಿವರಾಜ್‍ಕುಮಾರ್ ರವರು ಹೀನಾಯ ಸೋಲನುಭವಿಸಿದ್ದರು. ಮೂರನೇ ಸ್ಥಾನಕ್ಕೆ ಕುಸಿದಿದ್ದರು.  ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಂಜುನಾಥ ಭಂಡಾರಿಯವರು ಎಲ್ಲರ ನಿರೀಕ್ಷೆ ಹುಸಿಗೊಳಿಸಿ 2 ನೇ ಸ್ಥಾನ ಗಳಿಸಿದ್ದರು. 

ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಗೀತಾ ಶಿವರಾಜ್‍ಕುಮಾರ್ ರವರು ರಾಜಕೀಯ ಚಟುವಟಿಕೆಯಿಂದ ದೂರ ಉಳಿದಿದ್ದಾರೆ. ಉಳಿದಂತೆ ಆ ಪಕ್ಷದ ಮಾಜಿ ಶಾಸಕ ಮಧು ಬಂಗಾರಪ್ಪರವರು ಉಪ ಚುನಾವಣೆ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟರೆ, ಕಾಂಗ್ರೆಸ್ ಪಕ್ಷದವರೇ ಅಭ್ಯರ್ಥಿಯಾಗುವುದು ಖಚಿತವಾಗಿದೆ. 
 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News