ಮಂಜೇಶ್ವರ: ಮಹಿಳೆ ಸಹಿತ ಎಂಟು ಮಂದಿ ಸಿಪಿಎಂ ಕಾರ್ಯಕರ್ತರ ಮೇಲೆ ತಂಡದಿಂದ ಹಲ್ಲೆ

Update: 2018-10-08 05:38 GMT

ಮಂಜೇಶ್ವರ, ಅ.7: ಮಹಿಳೆ ಸಹಿತ ಎಂಟು ಮಂದಿ ಸಿಪಿಎಂ ಕಾರ್ಯಕರ್ತರ ಮೇಲೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡವೊಂದು ಹಲ್ಲೆ ನಡೆಸಿದ ಘಟನೆ ಇಲ್ಲಿನ ಪಾವೂರಿನ ಪೊಯ್ಯೆ ಎಂಬಲ್ಲಿ ಇಂದು ಸಂಜೆ ನಡೆದಿದೆ.

ಹಲ್ಲೆಯಿಂದ ಸಿಪಿಎಂ ಮಂಜೇಶ್ವರ ಏರಿಯಾ ಕಮಿಟಿ ಸದಸ್ಯ ಬೂಬ (50), ಅವರ ಪತ್ನಿ ಹರಿಣಾಕ್ಷಿ (45), ಸಿಪಿಎಂ ವರ್ಕಾಡಿ ಸ್ಥಳೀಯ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಟಿ. (30), ಸದಸ್ಯ ಮಹೇಶ್ ಟಿ. (30) ಹಾಗೂ ಕಾರ್ಯಕರ್ತರಾದ ಅಕ್ಷಯ್ ಕುಮಾರ್ (22), ದೀಕ್ಷಿತ್ (22), ನಿತಿನ್ (22) ಮತ್ತು ಚರಣ್‌ರಾಜ್ (23) ಎಂಬವರು ಗಾಯಗೊಂಡಿದ್ದಾರೆ.

ಘಟನೆ ವಿವರ

ಇಂದು ಸಂಜೆ 7:15ರ ಸುಮಾರಿಗೆ ಈ ಕೃತ್ಯ ನಡೆದಿದೆ. ಪೊಯ್ಯೆಯಲ್ಲಿರುವ ಚಾಮುಂಡೇಶ್ವರಿ ಮಂದಿರದಲ್ಲಿ ನಡೆದ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಂದಿರದಿಂದ ಹೊರಬರುತ್ತಿದ್ದಂತೆ ಹಲವು ಬೈಕ್‌ಗಳಲ್ಲಿ ಆಗಮಿಸಿದ ನೂರರಷ್ಟಿದ್ದ ಮಂದಿ ಸಿಪಿಎಂ ಮಂಜೇಶ್ವರ ಏರಿಯಾ ಕಮಿಟಿ ಸದಸ್ಯ ಬೂಬ ಸಹಿತ ಏಳು ಮಂದಿಯ ಮೇಲೆ ದಾಳಿ ನಡೆಸಿದೆ. ಈ ವೇಳೆ ಹಲ್ಲೆಕೋರರಿಂದ ತಪ್ಪಿಸಿಕೊಂಡು ತನ್ನ ಮನೆಗೆ ಓಡಿದ ಬೂಬ ಅವರನ್ನು ತಂಡ ಅಟ್ಟಾಡಿಸಿಕೊಂಡು ಹೋಗಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ತಡೆಯಲೆತ್ನಿಸಿದ ಬೂಬ ಅವರ ಪತ್ನಿಯ ಮೇಲೂ ಹಲ್ಲೆ ನಡೆಸಿದೆ ಎಂದು ದೂರಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಎಂಟು ಮಂದಿಯನ್ನು ಕುಂಬಳೆಯಲ್ಲಿರುವ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಈ ಹಲ್ಲೆ ನಡೆಸಿರುವುದಾಗಿ ಮಂಜೇಶ್ವರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿ ಈ ದಾಳಿ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸಹಕಾರಿ ಬ್ಯಾಂಕ್ ಚುನಾವಣೆಯನ್ನು ಸಿಪಿಎಂ- ಕಾಂಗ್ರೆಸ್ ಮೆತ್ರಿಕೂಟ ಎದುರಿಸಲಿದೆ. ಇದರಿಂದ ಸೋಲಿನ ಭೀತಿಯಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರ ಈ ಆಕ್ರಮಣ ನಡೆಸಿದೆ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News