ಅಂಡರ್-19 ಏಶ್ಯಕಪ್: ಭಾರತ ಚಾಂಪಿಯನ್

Update: 2018-10-07 18:24 GMT

ಢಾಕಾ, ಅ.7: ಎಸಿಸಿ ಅಂಡರ್ -19 ಏಶ್ಯಕಪ್ ಕ್ರಿಕೆಟ್ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ 144 ರನ್‌ಗಳ ಭರ್ಜರಿ ಜಯ ಗಳಿಸಿದ ಭಾರತ ಕ್ರಿಕೆಟ್ ತಂಡ ಆರನೇ ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಸತತ ಐದು ಆವೃತ್ತಿಗಳಲ್ಲಿ ಪ್ರಶಸ್ತಿ ಬಾಚಿದ್ದ ಭಾರತ 2017ನೇ ಆವೃತ್ತಿಯಲ್ಲಿ ಸೆಮಿಫೈನಲ್ ತಲುಪುವಲ್ಲಿ ಎಡವಿತ್ತು. ಇದೀಗ ಮತ್ತೆ ಬಲಿಷ್ಠ ತಂಡವಾಗಿ ಕಣಕ್ಕಿಳಿದಿದ್ದ ಭಾರತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದೊಂದಿಗೆ ಅಜೇಯವಾಗಿ ಫೈನಲ್ ಪ್ರವೇಶಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ಢಾಕಾದಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ ಭಾರತದ ಅಂಡರ್ -19 ತಂಡ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 304 ರನ್ ಗಳಿಸಿತ್ತು. ಗೆಲುವಿಗೆ 305 ರನ್‌ಗಳ ಕಠಿಣ ಸವಾಲನ್ನು ಪಡೆದ ಶ್ರೀಲಂಕಾ ತಂಡ38.4 ಓವರ್‌ಗಳಲ್ಲಿ 160 ರನ್‌ಗಳಿಗೆ ಆಲೌಟಾಗಿದೆ. ಭಾರತದ ಹರ್ಷ ತ್ಯಾಗಿ (10-0-38-6) ದಾಳಿಗೆ ಸಿಲುಕಿದ ಶ್ರೀಲಂಕಾ ತಂಡ ಬೇಗನೇ ಇನಿಂಗ್ಸ್ ಮುಗಿಸಿತು.

ಶ್ರೀಲಂಕಾದ ಆರಂಭ ಚೆನ್ನಾಗಿರಲಿಲ್ಲ. 6.1ನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ತಂಡದ ಸ್ಕೋರ್ 20ಕ್ಕೆ ತಲುಪುವಾಗ ನಾಯಕ ನಿಪುಣ್ ಧನಂಜಯ(12) ಅವರು ಮೋಹಿತ್ ಜಾಂಗ್ರಾ ಎಸೆತದಲ್ಲಿ ಅನುಜ್ ರಾವತ್‌ಗೆ ಕ್ಯಾಚ್ ನೀಡಿದರು.

ಕ್ರೀಸ್‌ಗೆ ಆಗಮಿಸಿದ ಪಾಸಿಂದು ಸೂರ್ಯಬಂಡಾರ (32 ಎಸೆತಗಳಲ್ಲಿ 31) ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ 15.3ನೇ ಓವರ್‌ನಲ್ಲಿ ಪಾಸಿಂದುಗೆ ತ್ಯಾಗಿ ಪೆವಿಲಿಯನ್ ಹಾದಿ ತೋರಿಸಿದರು.

ತ್ಯಾಗಿ ಹಿಡಿತ ಸಾಧಿಸಿ 18ನೇ ಓವರ್‌ನಲ್ಲಿ ಕಲನಾ ಪೆರೆರಾ(0), ನುವಾನಿದು ಫೆರ್ನಾಂಡೊ (4)ರನ್ನು ಪೆವಿಲಿಯನ್‌ಗೆ ಅಟ್ಟಿದರು. ಈ ವೇಳೆ ಶ್ರೀಲಂಕಾದ ಸ್ಕೋರ್ 19.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 79.

ವೇಗಿ ತ್ಯಾಗಿ ಪ್ರಹಾರ ಮುಂದುವರಿಸಿ ಲಂಕಾ ಸ್ಕೋರ್ 23.5 ಓವರ್‌ಗಳಲ್ಲಿ 104ಕ್ಕೆ ತಲುಪುವಾಗ ಇನ್ನೊಂದು ವಿಕೆಟ್ ಉಡಾಯಿಸಿದರು. ಆರಂಭಿಕ ದಾಂಡಿಗ ಹಾಗೂ ವಿಕೆಟ್ ಕೀಪರ್ ನಿಶಾನ್ ಎಂ ಮದುಷ್ಕ್ಕಾ (49) ಅವರು 1 ರನ್‌ನಿಂದ ಅರ್ಧಶತಕ ವಂಚಿತಗೊಂಡರು. ಬಳಿಕ ಲಂಕಾದ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ನವೊದ್ ಪರಣವಿಥನ (48) ಅವರನ್ನು ಸಿದ್ಧಾರ್ಥ ದೇಸಾಯಿ ಎಲ್‌ಬಿಡಬ್ಲು ಬಲೆಗೆ ಬೀಳಿಸುವುದರೊಂದಿಗೆ ಲಂಕಾದ ಇನಿಂಗ್ಸ್ ಕೊನೆಗೊಂಡಿತು.

<ಭಾರತ 304/3: ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಭಾರತ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 304 ರನ್ ಗಳಿಸಿತು. ಆರಂಭಿಕ ದಾಂಡಿಗರಾದ ಯಶಸ್ವಿ ಜೈಸ್ವಾಲ್ (85, 113 ಎಸೆತ, 8 ಬೌಂಡರಿ, 1 ಸಿಕ್ಸರ್) ಮತ್ತು ಅನುಜ್ ರಾವತ್ (57, 79 ಎಸೆತ, 4 ಬೌಂಡರಿ, 3 ಸಿಕ್ಸರ್) 25 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 121 ರನ್ ಸೇರಿಸುವ ಮೂಲಕ ಉತ್ತಮ ಅಡಿಪಾಯ ಹಾಕಿ ಕೊಟ್ಟರು. ಎರಡನೇ ವಿಕೆಟ್‌ಗೆ ಜೈಸ್ವಾಲ್ ಮತ್ತು ದೇವ್‌ದತ್ ಪಡಿಕ್ಕಲ್ (31) 12.2 ಓವರ್‌ಗಳಲ್ಲಿ 59 ರನ್ ಜಮೆ ಮಾಡಿದರು. 40.5 ಓವರ್‌ಗಳಲ್ಲಿ ಸ್ಕೋರ್ 194ಕ್ಕೆ ತಲುಪುವಾಗ ಭಾರತದ ಇನ್ನೊಂದು ವಿಕೆಟ್ ಉರುಳಿತು.

ನಾಲ್ಕನೇ ವಿಕೆಟ್‌ಗೆ ನಾಯಕ ಹಾಗೂ ವಿಕೆಟ್ ಕೀಪರ್ ಪ್ರಭಾಸಿಮ್ರಾನ್ ಸಿಂಗ್ ಮತ್ತು ಆಯುಷ್ ಬಡೋನಿ ಮುರಿಯದ ಜೊತೆಯಾಟದಲ್ಲಿ 110 ರನ್ ಸೇರಿಸುವ ಮೂಲಕ ತಂಡದ ಸ್ಕೋರ್‌ನ್ನು 300ರ ಗಡಿ ದಾಟಿಸಿದರು.

ಪ್ರಭಾ ಸಿಮ್ರಾನ್ ಸಿಂಗ್ ಔಟಾಗದೆ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಲ್ಲಿ 65 ರನ್ ಹಾಗೂ ಬಡೋಣಿ ಔಟಾಗದೆ 28 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್ ಸಹಾಯದಿಂದ 52 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News