ಲೈಂಗಿಕ ಕಿರುಕುಳ ಆರೋಪ: ಹಿಂದೂಸ್ತಾನ್ ಟೈಮ್ಸ್ ತೊರೆದ ಪತ್ರಕರ್ತ ಪ್ರಶಾಂತ್ ಝಾ

Update: 2018-10-08 17:46 GMT

ಹೊಸದಿಲ್ಲಿ, ಅ.8: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ‘ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಯ ರಾಜಕೀಯ ಸುದ್ದಿ ವಿಭಾಗದ ಸಂಪಾದಕ ಹಾಗೂ ಬ್ಯೂರೋ ಮುಖ್ಯಸ್ಥ ಪ್ರಕಾಶ್ ಝಾ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಪೋಸ್ಟ್ ಮಾಡಿದ್ದ ಹಿಂದೂಸ್ತಾನ್ ಟೈಮ್ಸ್‌ನ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಝಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. 2017ರಲ್ಲಿ ತಾನು ಪತ್ರಿಕೆಯನ್ನು ತೊರೆದ ಬಳಿಕ ತನಗೆ ಝಾ ಸಂದೇಶಗಳನ್ನು ಕಳುಹಿಸುತ್ತಿದ್ದು ಇದರಿಂದ ಕಿರಿಕಿರಿಯಾಗುತ್ತಿತ್ತು. ಆದರೆ ಆಗ ತಾನು ಪತ್ರಿಕೆಯನ್ನು ತೊರೆದಿದ್ದ ಕಾರಣ ಪತ್ರಿಕೆಯ ಆಡಳಿತವರ್ಗದವರಿಗೆ ದೂರು ನೀಡಿಲ್ಲ ಎಂದು ಅವರು ದೂರಿದ್ದರು ಹಾಗೂ ಝಾ ಕಳಿಸಿದ್ದ ಸಂದೇಶಗಳ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.

  ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ರವಿವಾರ ಪತ್ರಿಕೆಯ ವಕ್ತಾರರು ತಿಳಿಸಿದ್ದರು. ಸೋಮವಾರ ಪತ್ರಿಕೆಯ ಸಂಪಾದಕರೊಂದಿಗೆ ಸಭೆ ನಡೆಸಿದ ಬಳಿಕ , ಘಟನೆ ತನ್ನ ನೈತಿಕತೆಯನ್ನು ಪ್ರಶ್ನಿಸುತ್ತಿರುವ ಕಾರಣ , ನನ್ನಿಂದಾಗಿ ಸಂಸ್ಥೆಗೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವುದಾಗಿ ಝಾ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News