×
Ad

ವಲಸಿಗ ಕಾರ್ಮಿಕರು ವಾಪಸ್ ಬರುವಂತೆ ಮನವಿ ಮಾಡಿದ ಗುಜರಾತ್ ಸಚಿವ

Update: 2018-10-08 20:21 IST

ಹೊಸದಿಲ್ಲಿ,ಅ.8: ಐದು ಜಿಲ್ಲೆಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಪರಿಣಾಮವಾಗಿ ರಾಜ್ಯವನ್ನು ತೊರೆದಿದ್ದ ವಲಸಿಗ ಕಾರ್ಮಿಕರು ವಾಪಸ್ ಬರುವಂತೆ ಗುಜರಾತ್ ಸಚಿವ ಮನವಿ ಮಾಡಿದ್ದಾರೆ.

ವಲಸಿಗ ಕಾರ್ಮಿಕನೊಬ್ಬ 14ರ ಹರೆಯದ ಬಾಲಕಿಯನ್ನು ಅತ್ಯಚಾರ ಮಾಡಿದ ಒಂದು ವಾರದ ನಂತರ ಮೆಹಸನ ಮತ್ತು ಸಾಬರ್ಕಾಂತ ಸೇರಿದಂತೆ ಗುಜರಾತ್‌ನ ಐದು ಜಿಲ್ಲೆಗಳಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶದಿಂದ ಆಗಮಿಸಿದ್ದ ವಲಸಿಗ ಕಾರ್ಮಿಕರನ್ನು ಗುರಿಯಾಗಿಸಿ ಹಿಂಸೆ ಭುಗಿಲೆದ್ದಿತ್ತು.

ಇತರ ರಾಜ್ಯಗಳಿಂದ ಉದ್ಯೋಗಕ್ಕಾಗಿ ಗುಜರಾತ್‌ಗೆ ಆಗಮಿಸುವವರಿಗೆ ರಕ್ಷಣೆಯನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಮರುಸ್ಥಾಪಿಸುವ ವಿಷಯದಲ್ಲಿ ನಾವು ಗಂಭೀರವಾಗಿದ್ದೇವೆ. ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ 35 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಗೃಹ ಸಚಿವ ಪ್ರದೀಪಸಿನ್ಹ ಜಡೇಜಾ ತಿಳಿಸಿದ್ದಾರೆ. ವಲಸಿಗರ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳಲ್ಲಿ ಈಗಾಗಲೇ 450ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದ್ದು ರಾಜ್ಯ ಪೊಲೀಸರು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಈ ಕುರಿತು ಕೇಂದ್ರಕ್ಕೆ ವರದಿಯನ್ನು ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಪ್ಟೆಂಬರ್ 28ರಂದು ಸಾಬರ್ಕಾಂತ ಜಿಲ್ಲೆಯಲ್ಲಿ ಬಾಲಕಿಯ ಅತ್ಯಾಚಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಗಾಂಧಿನಗರ,ಅಹಮದಾಬಾದ್, ಪಠಾಣ್,ಸಾಬರ್ಕಾಂತ ಮತ್ತು ಮೆಹಸನಾ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ವಲಸಿಗ ಕಾರ್ಮಿಕರ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News