ಬಿಜೆಪಿಯಿಂದ ದ್ವಿಮುಖ ನೀತಿ: ಪಿಣರಾಯಿ ವಿಜಯನ್
ತಿರುವನಂತಪುರಂ, ಅ.8: ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರೂ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್‌ನ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಸರಕಾರ ತೀರ್ಮಾನಿಸಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಈ ವಿಷಯದಲ್ಲಿ ಬಿಜೆಪಿ ದ್ವಿಮುಖ ನೀತಿ ಅನುಸರಿಸುತ್ತಿದೆ. ಬಿಜೆಪಿ ಮತ್ತು ಆರೆಸ್ಸೆಸ್ ತಪ್ಪು ಸಂಪ್ರದಾಯದ ಲಾಭ ಪಡೆಯುತ್ತಿದೆ. ರಾಜಕೀಯ ಪಕ್ಷಗಳು ಪ್ರಗತಿಪರ ಹೆಜ್ಜೆ ಇಡಲು ಇದು ಸಕಾಲವಾಗಿದೆ. ಈಗ ಸುಪ್ರೀಂ ಆದೇಶದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ಮಹಾರಾಷ್ಟ್ರದಲ್ಲಿ ಶನಿ ಶಿಂಗ್ಣಪುರ್ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡಬೇಕು ಎಂದು 2016ರಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಜಾರಿಗೊಳಿಸಿದೆ . ಇದೇ ರೀತಿ ಹಾಜಿ ಆಲಿ ದರ್ಗಾಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಅವಕಾಶ ಮಾಡಿಕೊಟ್ಟಾಗ ಬಿಜೆಪಿ ಪ್ರತಿಭಟಿಸಲಿಲ್ಲ. ತಮ್ಮ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಅವರು ಮಹಿಳೆಯರು ದೇವಸ್ಥಾನ ಪ್ರವೇಶಿಸುವ ಪರವಾಗಿದ್ದಾರೆ. ಆದರೆ ಕೇರಳದಲ್ಲಿ ಯಾಕೆ ವಿರೋಧ ಎಂದು ವಿಜಯನ್ ಪ್ರಶ್ನಿಸಿದರು.
ತಾನು ಸುಪ್ರೀಂ ಆದೇಶವನ್ನು ಜಾರಿಗೊಳಿಸಲು ಬದ್ಧನಾಗಿದ್ದೇನೆ. ಸರಕಾರ ಮಾತುಕತೆಗೆ ೆ ಸಿದ್ಧವಿದೆ , ಇದೇ ವೇಳೆ ಭಕ್ತರ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಎಂದರು. ಈಗ ಕಾಲ ಬದಲಾಗಿದೆ. ಇಂದಿನ ದಿನದಲ್ಲಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ತೋರುತ್ತಿದ್ದು ಪುರುಷರಿಗೆ ಸಮಾನರಾಗಿದ್ದಾರೆ. ಹಿಂದಿನ ದಿನಗಳಲ್ಲಿ ಋತುಮತಿಯಾದ ಮಹಿಳೆಯರು ಅಡುಗೆ ಕೋಣೆ ಪ್ರವೇಶಿಸಲು ಅವಕಾಶ ಇರಲಿಲ್ಲ. ಆದರೆ ಈಗ ಈ ಸಂಪ್ರದಾಯ ಮರೆಯಾಗುತ್ತಿದೆ ಎಂದವರು ಹೇಳಿದರು.
ಸುಪ್ರೀಂಕೋರ್ಟ್‌ನ ಆದೇಶವನ್ನು ಎಲ್‌ಡಿಎಫ್ ಸರಕಾರ ತರಾತುರಿಯಲ್ಲಿ ಜಾರಿಗೊಳಿಸಿದ್ದು ಅಯ್ಯಪ್ಪ ದೇವರ ಭಕ್ತರ ಭಾವನೆಗಳಿಗೆ ಗಮನ ನೀಡಿಲ್ಲ ಎಂದು ವಿಪಕ್ಷಗಳು ಹಾಗೂ ಆರೆಸ್ಸೆಸ್ ಟೀಕಿಸಿವೆ. ಸುಪ್ರೀಂಕೋರ್ಟ್‌ನ ತೀರ್ಪನ್ನು ವಿರೋಧಿಸಿ ಕಳೆದ ವಾರದಿಂದ ರಾಜ್ಯದಾದ್ಯಂತ ಹಲವೆಡೆ ಪ್ರತಿಭಟನೆ ನಡೆದಿದೆ.