ಗುಜರಾತ್: ಪ್ರತೀಕಾರ ಹಿಂಸೆಗೆ ಬೆದರಿ 50 ಸಾವಿರ ವಲಸಿಗರ ಪಲಾಯನ

Update: 2018-10-08 17:25 GMT

ಹೊಸದಿಲ್ಲಿ, ಅ.8: ಗುಜರಾತ್‌ನಲ್ಲಿ 14 ತಿಂಗಳ ಹೆಣ್ಣು ಮಗುವಿನ ಮೇಲೆ ಬಿಹಾರ ಮೂಲದ ವ್ಯಕ್ತಿ ಅತ್ಯಾಚಾರ ನಡೆಸಿರುವ ಘಟನೆ ರಾಜ್ಯದಲ್ಲಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದ್ದು, ಭೀತಿಗೊಳಗಾಗಿರುವ ಉತ್ತರ ಭಾರತದ ಸುಮಾರು 50,000 ವಲಸಿಗರು ಗುಜರಾತ್‌ನಿಂದ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.

ಜನತೆ ಭೀತಿಯಿಂದ ಪಲಾಯನ ಮಾಡುತ್ತಿರುವ ಘಟನೆ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಪ್ರಧಾನಮಂತ್ರಿಯ ತವರೂರಾದ ಗುಜರಾತ್‌ನಲ್ಲಿ ಉತ್ತರ ಭಾರತೀಯರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಲಾಗುತ್ತಿದೆ. ಆದರೆ ಒಂದು ದಿನ ತಾನು ಕೂಡಾ ಮತ ಯಾಚನೆಗೆ ಬನಾರಸ್‌ಗೆ ಹೋಗಬೇಕಿದೆ ಎಂಬುದನ್ನು ಅವರು ಮರೆಯಬಾರದು ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಪ್ರಧಾನಿ ಮೋದಿಗೆ ಎಚ್ಚರಿಕೆ ನೀಡಿದ್ದಾರೆ.

ಮಗುವಿನ ಮೇಲೆ ನಡೆದಿರುವ ಅತ್ಯಾಚಾರ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಬಿಹಾರ ಮತ್ತು ಉತ್ತರಪ್ರದೇಶದ ಜನರನ್ನು ಗುರಿಯಾಗಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಘಟನೆಗೆ ಸಂಬಂಧಿಸಿ ಇದುವರೆಗೆ 35 ಎಫ್‌ಐಆರ್ ದಾಖಲಾಗಿದೆ ಎಂದು ಗುಜರಾತ್ ಗೃಹ ಸಚಿವ ಪ್ರದೀಪ್‌ಸಿನ್ಹ ಜಡೇಜ ಹೇಳಿದ್ದಾರೆ. ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು ಹಲ್ಲೆ ಘಟನೆ ಕಡಿಮೆಯಾಗಿದೆ. ಜನತೆ ಭಯಪಡಬಾರದು ಎಂದವರು ಕರೆ ನೀಡಿದ್ದಾರೆ. ರವಿವಾರ ರಾತ್ರಿ ವಡೋದರದ ಉಪನಗರ ವಘೋಡಿಯಾದಲ್ಲಿ ಫ್ಯಾಕ್ಟರಿಯ ಐದು ಮಂದಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿ 16 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸೌರಾಷ್ಟ್ರದ ಕೋಡಿನಾರ್ ಎಂಬ ನಗರದಲ್ಲಿರುವ ಫ್ಯಾಕ್ಟರಿಯೊಂದಕ್ಕೆ ಅಕ್ರಮ ಪ್ರವೇಶ ಮಾಡಿದ ಸ್ಥಳೀಯರು ಫ್ಯಾಕ್ಟರಿ ಮುಚ್ಚುವಂತೆ ಎಚ್ಚರಿಕೆ ನೀಡಿದ ಘಟನೆ ವರದಿಯಾಗಿದೆ. ಇದೇ ರೀತಿಯ ಘಟನೆಗಳು ಹಲೋಲ್ ಮತ್ತು ಚಂದ್ಲೋಡಿಯ ಗ್ರಾಮದಲ್ಲೂ ನಡೆದಿರುವುದಾಗಿ ವರದಿಯಾಗಿದೆ. ಈ ಮಧ್ಯೆ, ಸೋಮವಾರ ಗುಜರಾತ್ ಮುಖ್ಯಮಂತ್ರಿ ಜಡೇಜರಿಗೆ ಕರೆ ಮಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ , ಹಲ್ಲೆ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದು ಇದಕ್ಕೆ ಉತ್ತರಿಸಿದ ಜಡೇಜ, ಗುಜರಾತ್ ಸರಕಾರ ಕೇಂದ್ರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಪ್ರತೀ ಘಟನೆಯ ಕುರಿತೂ ಕೇಂದ್ರಕ್ಕೆ ವರದಿ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಇತರ ರಾಜ್ಯಗಳಿಂದ ಬಂದಿರುವ ಕಾರ್ಮಿಕರಿಗೆ ಭದ್ರತೆ ಮತ್ತು ರಕ್ಷಣೆ ಒದಗಿಸುವುದು ಸರಕಾರದ ಕರ್ತವ್ಯವಾಗಿದೆ ಎಂದವರು ತಿಳಿಸಿದ್ದಾರೆ.

ರವಿವಾರ ಒಂದೇ ದಿನ ತನಗೆ ಸುಮಾರು 700 ಬೆದರಿಕೆ ಕರೆ ಬಂದಿರುವುದಾಗಿ ವಲಸಿಗ ಕಾರ್ಮಿಕರ ಸಂಘಟನೆ -ಉತ್ತರ ಭಾರತೀಯ ವಿಕಾಸ ಪರಿಷದ್‌ನ ಅಧ್ಯಕ್ಷ ಶ್ಯಾಮಸಿನ್ಹ ಠಾಕುರ್ ತಿಳಿಸಿದ್ದಾರೆ ಎಂದು ‘ಮುಂಬೈ ಮಿರರ್’ ಉಲ್ಲೇಖಿಸಿದೆ. ಗುಜರಾತ್‌ನ ಬೃಹತ್ ನಗರಗಳಲ್ಲಿ ಪರಿಸ್ಥಿತಿ ಈಗ ನಿಯಂತ್ರಣಕ್ಕೆ ಬಂದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಹದಗೆಟ್ಟಿದೆ. 50 ಸಾವಿರಕ್ಕೂ ಹೆಚ್ಚು ಉತ್ತರ ಭಾರತೀಯರು (ಬಹುತೇಕ ಉ.ಪ್ರದೇಶ ಮತ್ತು ಬಿಹಾರದ ಕಾರ್ಮಿಕರು) ಹಿಂಸಾಚಾರದ ಭಯದಿಂದ ಪಲಾಯನ ಮಾಡಿದ್ದು ಮೂರು, ನಾಲ್ಕು ತಿಂಗಳ ಬಳಿಕ ಮರಳಿ ಬರಬಹುದು. ಸುಮಾರು ಶೇ.70ರಷ್ಟು ಕಾರ್ಮಿಕರು ತೆರಳಿರುವ ಕಾರಣ ಉದ್ದಿಮೆ ಹಾಗೂ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಠಾಕುರ್ ತಿಳಿಸಿದ್ದಾರೆ. ಈ ಮಧ್ಯೆ ಹೇಳಿಕೆ ನೀಡಿರುವ ಪೊಲೀಸ್ ಮಹಾನಿರ್ದೇಶಕ ಶಿವಾನಂದ ಝಾ ಸಾಮೂಹಿಕವಾಗಿ ಗುಳೇ ಹೋಗುವಂತಹ ಸ್ಥಿತಿ ಇಲ್ಲ ಎಂದು ಹೇಳಿದ್ದಾರೆ.

ಮುಂಬರುವ ಹಬ್ಬದ ಋತುವಿಗಾಗಿ ಬಿಹಾರ ಮತ್ತು ಉ.ಪ್ರದೇಶದ ಕಾರ್ಮಿಕರು ಊರಿಗೆ ತೆರಳಿದ್ದಾರೆ. ಹಬ್ಬದ ಸಂಭ್ರಮ ಕಳೆದ ಬಳಿಕ ಅವರು ಮರಳಲಿದ್ದಾರೆ ಎಂದಿದ್ದಾರೆ. ಆದರೂ, ಜನವಸತಿ ಪ್ರದೇಶ, ರೈಲ್ವೇ ಸ್ಟೇಷನ್, ಬಸ್ಸು ನಿಲ್ದಾಣಕ್ಕೆ ತೆರಳಿ ಅಲ್ಲಿರುವ ಜನತೆಯನ್ನು ವಿಚಾರಿಸಬೇಕು. ಒಂದು ವೇಳೆ ಭೀತಿಯ ಕಾರಣ ಅವರು ಊರಿಗೆ ತೆರಳುವುದಾದರೆ ಅವರ ಮನ ಒಲಿಸಬೇಕೆಂದು ಪೊಲೀಸ್ ಸಿಬ್ಬಂದಿಗೆ ಸೂಚಿಸಿರುವುದಾಗಿ ಶಿವಾನಂದ ಝಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News