ದಿಲ್ಲಿ: ಗಾಳಿಯ ಗುಣಮಟ್ಟ ಮತ್ತೆ ಕುಸಿತ

Update: 2018-10-08 17:43 GMT

ಹೊಸದಿಲ್ಲಿ, ಅ.8: ಗಾಳಿಬೀಸುವ ದಿಕ್ಕು ಬದಲಾಗಿರುವ ಹಿನ್ನೆಲೆಯಲ್ಲಿ ದಿಲ್ಲಿಯ ಗಾಳಿಯ ಗುಣಮಟ್ಟ ಮತ್ತೆ ಕೆಳಮಟ್ಟಕ್ಕೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ಮತ್ತು ಹರ್ಯಾಣದಲ್ಲಿ ಈಗ ಬೆಳೆತ್ಯಾಜ್ಯವನ್ನು ಸುಡುವ ಸಮಯವಾಗಿದ್ದು, ಆ ದಿಕ್ಕಿನಿಂದ ರಾಜಧಾನಿಯತ್ತ ಗಾಳಿ ಬೀಸುತ್ತಿದೆ. ಇದರಿಂದ ತ್ಯಾಜ್ಯದ ಹೊಗೆಯನ್ನೂ ಗಾಳಿ ಹೊತ್ತು ತರುತ್ತಿದೆ. ರವಿವಾರ ಗಾಳಿಯ ಗುಣಮಟ್ಟ 181 ಸೂಚ್ಯಾಂಕದೊಂದಿಗೆ ಸಾಧಾರಣ ಮಟ್ಟಕ್ಕೆ ಏರಿತ್ತು. ಆದರೆ ಸೋಮವಾರ 235 ಅಂಕ ದಾಖಲಿಸಿ ಕೆಳಮಟ್ಟಕ್ಕೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

0ಯಿಂದ 50ರವರೆಗಿನ ಗಾಳಿಯ ಗುಣಮಟ್ಟ ಸೂಚ್ಯಾಂಕ(ಎಕ್ಯೂಐ) ಉತ್ತಮ, 51ರಿಂದ 100 ತೃಪ್ತಿದಾಯಕ, 101ರಿಂದ 200 ಸಾಧಾರಣ, 201ರಿಂದ 300 ಕೆಳಮಟ್ಟ, 301ರಿಂದ 400 ಅತೀ ಕೆಳಮಟ್ಟ ಹಾಗೂ 401ರಿಂದ 500ರ ಮಟ್ಟವನ್ನು ಗಂಭೀರ ಎಂದು ಪರಿಗಣಿಸಲಾಗಿದೆ.

ರವಿವಾರ ವಾಹನ ಸಂಚಾರ ಪ್ರಮಾಣ ಕಡಿಮೆಯಿದ್ದ ಕಾರಣ ಹಾಗೂ ಗಾಳಿಯ ವೇಗ ಹೆಚ್ಚಿದ ಕಾರಣ ಎಕ್ಯೂಐ ಪ್ರಮಾಣ ಸ್ವಲ್ಪ ಸುಧಾರಿಸಿತ್ತು. ಆದರೆ ಸೋಮವಾರ ಸಂಚಾರ ಪ್ರಮಾಣ ಹೆಚ್ಚಿದ್ದೂ ಗಾಳಿಯ ಗುಣಮಟ್ಟ ಕುಸಿಯಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News