ಅಡುಗೆ ಸಹಾಯಕ ಯಶಸ್ವಿ ಜೈಸ್ವಾಲ್ ಇದೀಗ ದೇಶದ ಕ್ರಿಕೆಟ್ ಕಣ್ಮಣಿ... !

Update: 2018-10-08 17:47 GMT
ಯಶಸ್ವಿ ಜೈಸ್ವಾಲ್     -    ಜ್ವಾಲಾ ಸಿಂಗ್                  

ಮುಂಬೈ, ಸೆ. ಅ.8: ಅಂಡರ್-19 ಏಶ್ಯಕಪ್‌ನ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವಿನೊಂದಿಗೆ 6ನೇ ಬಾರಿ ಕಿರೀಟವನ್ನು ಮುಡಿಗೇರಿಸಲು ನೆರವಾದ ಭಾರತ ತಂಡದ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ಒಂದೊಮ್ಮೆ ಅಡುಗೆ ಸಹಾಯಕನಾಗಿದ್ದರು. ಇದೀಗ ತನ್ನ ಕಠಿಣ ಶ್ರಮದ ಮೂಲಕ ದೇಶದ ಕ್ರಿಕೆಟ್ ನ ಭವಿಷ್ಯದ ತಾರೆಯಾಗಿ ಭರವಸೆ ಮೂಡಿಸಿದ್ದಾರೆ.

ಢಾಕಾದಲ್ಲಿ ರವಿವಾರ ನಡೆದ ಪಂದ್ಯದಲ್ಲಿ 113 ಎಸೆತಗಳಲ್ಲಿ 85 ರನ್ ಗಳಿಸಿ ಭಾರತ ತಂಡದ ಸ್ಕೋರ್ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 304ಕ್ಕೇರಿಸಲು ನೆರವಾಗಿದ್ದರು. ಜೈಸ್ವಾಲ್ ಟೂರ್ನಮೆಂಟ್‌ನಲ್ಲಿ 79.50 ಸರಾಸರಿಯಂತೆ 318 ರನ್ ಗಳಿಸಿ ಯಶಸ್ವಿ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

ಜೈಸ್ವಾಲ್ ಈಗ ಉತ್ತಮ ಕ್ರಿಕೆಟಿಗ. ಆದರೆ ಈ ಮಟ್ಟಕ್ಕೆ ಬೆಳೆಯಲು ಅವರು ಕಠಿಣ ಹಾದಿ ನಿಜಕ್ಕೂ ಅದೊಂದು ನೋವಿನ ಕತೆ. ಮೂರು ವರ್ಷಗಳ ಹಿಂದೆ ಅವರ ಪರಿಸ್ಥಿತಿ ತೀರಾ ಭಿನ್ನವಾಗಿತ್ತು. ಜೈಸ್ವಾಲ್ ಮೂಲತಃ ಉತ್ತರ ಪ್ರದೇಶದ ಭದೋಹಿ ನಿವಾಸಿ.    

ಭೂಪೆಂದರ್ ಜೈಸ್ವಾಲ್ ಮತ್ತು ಕಾಂಚನಾ ಜೈಸ್ವಾಲ್ ದಂಪತಿಯ ಪುತ್ರ. ಯಶಸ್ವಿ ಜೈಸ್ವಾಲ್ ತಂದೆಗೆ ಸಣ್ಣ ಹಾರ್ಡ್‌ವೇರ್ ಅಂಗಡಿ ಇದೆ. 2012ರಲ್ಲಿ ಯಶಸ್ವಿ ಜೈಸ್ವಾಲ್ ತನ್ನ ಚಿಕ್ಕಪ್ಪನ ಜೊತೆ ಮುಂಬೈಗೆ ಕಾಲಿರಿಸಿದ್ದರು. ಆಗ ಅವರಿಗೆ 11ರ ಹರೆಯ. ಕಲ್ಬಾದೇವಿಯಲ್ಲಿರುವ ಡೈರಿ ಅಂಗಡಿ ಸೇರಿದ ಈತ ಹೆಚ್ಚಿನ ಸಮಯವನ್ನು ಕ್ರಿಕೆಟಿಗೆ ಮೀಸಲಿಟ್ಟರು. ಕ್ರಿಕೆಟ್‌ನಲ್ಲಿ ಮುಳುಗಿದ್ದ ಬಾಲಕ ಜೈಸ್ವಾಲ್ ರಾತ್ರಿ ಹೊತ್ತು ಅಲ್ಲೇ ಮಲಗುತ್ತಿದ್ದರು. ಅದೊಂದು ದಿನ ಜೈಸ್ವಾಲ್ ಹಾಲಿನ ಉತ್ಪನ್ನಗಳ ಅಂಗಡಿಯಿಂದ ಹೊರದಬ್ಬಲ್ಟಟ್ಟರು.

ಆಝಾದ್ ಮೈದಾನ್ ಗ್ರೌಂಡ್‌ನ ಮುಸ್ಲಿಂ ಯುನೈಟೆಡ್ ಕ್ಲಬ್‌ನ ಡೇರೆಯಲ್ಲಿ ಜೈಸ್ವಾಲ್‌ಗೆ ಅಲ್ಲಿನ ಕಾವಲುಗಾರ ಇಮ್ರಾನ್ ಆಶ್ರಯ ನೀಡಿದರು. ಜೈಸ್ವಾಲ್ ಅಲ್ಲಿ ಆಶ್ರಯ ಪಡೆದು ಕ್ರಿಕೆಟ್ ಆಟವನ್ನು ಮುಂದುವರಿಸಿದರು. ಆದರೆ ಕೈಯಲ್ಲಿ ಹಣವಿಲ್ಲದೆ ಪರದಾಡುತ್ತಿದ್ದ ಜೈಸ್ವಾಲ್ ಡೇರೆಯಲ್ಲಿ ಆಹಾರ ಪೂರೈಕೆ ಮಾಡುವವನಿಗೆ ಸಹಾಯಕನಾಗಿ ಸೇರಿಕೊಂಡರು. ಕ್ಲಬ್‌ನ ಸಿಬ್ಬಂದಿಗೆ ರೊಟ್ಟಿ ತಯಾರಿಸಲು ನೆರವಾಗುವುದರೊಂದಿಗೆ ಎರಡು ಹೊತ್ತಿನ ಊಟ, ತಿಂಡಿಗಾಗಿ ಅವರು ಎದುರಿಸುತ್ತಿದ್ದ ಸಮಸ್ಯೆ ದೂರವಾಯಿತು.

ಮುಂಬೈ ತಂಡದ ಪರ ಆಡುವ ಕನಸು ಕಾಣುತ್ತಿದ್ದ ಜೈಸ್ವಾಲ್‌ಗೆ ಅದೊಂದು ದಿನ ಕೋಚ್ ಜ್ವಾಲಾ ಸಿಂಗ್ ಪರಿಚಯವಾಯಿತು. ಬಾಲಕನಲ್ಲಿರುವ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸಿದ ಜ್ವಾಲಾ ಸಿಂಗ್ ಕ್ರಿಕೆಟ್ ಪಾಠವನ್ನು ಹೇಳಿಕೊಡಲಾರಂಭಿಸಿದರು.

 ಜೈಸ್ವಾಲ್ ಹ್ಯಾರಿಸ್ ಶೀಲ್ಡ್ ಶಾಲಾ ಮಕ್ಕಳ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಮೂಲಕ ಗಮನ ಸೆಳೆದರು. ಔಟಾಗದೆ 319 ರನ್ ಮತ್ತು 99ಕ್ಕೆ 13 ವಿಕೆಟ್ ಉಡಾಯಿಸಿ ಲಿಮ್ಕಾ ಪುಸ್ತಕದಲ್ಲಿ ತನ್ನ ಹೆಸರನ್ನು ಸೇರ್ಪಡೆಗೊಳಿಸಿದರು. ಮುಂಬೈ ಅಂಡರ್ 16 ತಂಡ ಸೇರ್ಪಡೆಗೊಂಡು ಬಳಿಕ ಅಂಡರ್-19ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಜೈಸ್ವಾಲ್ ಈ ತನಕ 52 ಶತಕ ಮತ್ತು 200 ವಿಕೆಟ್‌ಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ. ಜೈಸ್ವಾಲ್ ಅವರಿಗೆ ಕೋಚ್ ಜ್ವಾಲಾ ಸಿಂಗ್ ಒಂದು ರೀತಿಯಲ್ಲಿ ರಕ್ಷಕರಾಗಿದ್ದಾರೆ. ಜೈಸ್ವಾಲ್ ಮುಂದೆ ಮುಂಬೈ ರಣಜಿ ತಂಡದಲ್ಲಿ ಅವಕಾಶ ಪಡೆಯುವುದು ಖಚಿತ. ಭಾರತದ ಕ್ರಿಕೆಟ್ ತಂಡದಲ್ಲಿ ಜೈಸ್ವಾಲ್ ಮಿಂಚಲಿದ್ದಾರೆ ಎಂದು ಕೋಚ್ ಜ್ವಾಲಾ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News