ಪಂಜಾಬ್ ವಿರುದ್ಧ ಮುಗ್ಗರಿಸಿದ ಕರ್ನಾಟಕ

Update: 2018-10-08 18:20 GMT

► ವಿಜಯ್ ಹಝಾರೆ ಟ್ರೋಫಿ

ಬೆಂಗಳೂರು, ಅ.8: ಆರಂಭಿಕ ಆಟಗಾರ ಅನ್ಮೋಲ್‌ಪ್ರೀತ್ ಸಿಂಗ್ ಭರ್ಜರಿ ಶತಕ ಹಾಗೂ ಸಿದ್ಧಾರ್ಥ್ ಕೌಲ್ ಐದು ವಿಕೆಟ್ ಗೊಂಚಲು ನೆರವಿನಿಂದ ಪಂಜಾಬ್ ತಂಡ ವಿಜಯ್ ಹಝಾರೆ ಟ್ರೋಫಿಯಲ್ಲಿ ಆತಿಥೇಯ ಕರ್ನಾಟಕ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿದೆ.

ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಎಲೈಟ್ ಗ್ರೂಪ್ ‘ಎ’ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 296 ರನ್‌ಗೆ ಆಲೌಟಾಯಿತು. ಇದಕ್ಕುತ್ತರವಾಗಿ ಪಂಜಾಬ್ ತಂಡ 48.5 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 297 ರನ್ ಗಳಿಸಿ ಗೆಲುವಿನ ದಡ ಸೇರಿತು. ವೇಗದ ಬೌಲರ್ ಸಿದ್ಧ್ದಾರ್ಥ್ ಕೌಲ್ 41 ರನ್‌ಗೆ 5 ವಿಕೆಟ್ ಗೊಂಚಲು ಪಡೆದು ಕರ್ನಾಟಕ ತಂಡವನ್ನು ನಿಯಂತ್ರಿಸಿದರು. ಕೌಲ್ ದಾಳಿಗೆ ನಿರುತ್ತರವಾದ ಕರುಣ್ ನಾಯರ್(28), ಕೆ.ಅಬ್ಬಾಸ್(3), ಶ್ರೇಯಸ್ ಗೋಪಾಲ್(37), ಅನಿರುದ್ಧ ಜೋಶಿ(3)ಹಾಗೂ ಟಿ. ಪ್ರದೀಪ್(1) ವಿಕೆಟ್ ಒಪ್ಪಿಸಿದರು.

ಕೌಲ್‌ಗೆ ಬರಿಂದರ್ ಸಿಂಗ್ ಸ್ರಾನ್(3-48) ಉತ್ತಮ ಸಾಥ್ ನೀಡಿದರು. ಹಿರಿಯ ಆಟಗಾರ ಯುವರಾಜ್ ಸಿಂಗ್ ಹಾಗೂ ಯುವ ಲೆಗ್ ಸ್ಪಿನ್ನರ್ ಮಯಾಂಕ್ ಮರ್ಕಂಡೆ ತಲಾ ಒಂದು ವಿಕೆಟ್ ಪಡೆದರು.

ಕರ್ನಾಟಕದ ಪರ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬಿ.ಆರ್. ಶರತ್ 70 ರನ್ ಗಳಿಸಿದರು. ನಾಯಕ ಮನೀಶ್ ಪಾಂಡೆ(67), ಆರ್.ಸಮರ್ಥ್(54) ಹಾಗೂ ಶ್ರೇಯಸ್ ಗೋಪಾಲ್(37)ಉಪಯುಕ್ತ ಕಾಣಿಕೆ ನೀಡಿದರು.

ಗೆಲ್ಲಲು 297 ರನ್ ಗುರಿ ಪಡೆದಿದ್ದ ಪಂಜಾಬ್ ತಂಡ 20ರ ಹರೆಯದ ಅನ್ಮೋಲ್‌ಪ್ರೀತ್ ಮಿಂಚಿನ ಶತಕ(106 ಎಸೆತ, 138 ರನ್), ಶುಭ್‌ಮನ್ ಗಿಲ್(93 ಎಸೆತ,77) ಅರ್ಧಶತಕದ ಕೊಡುಗೆ ನೆರವಿನಿಂದ ಆರು ವಿಕೆಟ್‌ಗಳ ಅಂತರದ ಗೆಲುವು ಪಡೆಯಿತು.

 ಅನ್ಮೋಲ್‌ಪ್ರೀತ್ ಅವರು ಗಿಲ್‌ರೊಂದಿಗೆ ಎರಡನೇ ವಿಕೆಟ್‌ಗೆ 198 ರನ್ ಜೊತೆಯಾಟ ನಡೆಸಿ ಪಂಜಾಬ್ ರನ್ ಚೇಸಿಂಗ್‌ಗೆ ಭದ್ರಬುನಾದಿ ಹಾಕಿಕೊಟ್ಟರು.

ಬಲಗೈ ದಾಂಡಿಗ ಅನ್ಮೋಲ್‌ಪ್ರೀತ್ ಕೇವಲ 106 ಎಸೆತಗಳಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದರು. ಮತ್ತೊಂದೆಡೆ, ಗಿಲ್ 93 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಬಾರಿಸಿದರು. ಈ ಇಬ್ಬರು ಅಭಿಮನ್ಯು ಮಿಥುನ್ ನೇತೃತ್ವದ ಕರ್ನಾಟಕದ ಕಳಪೆ ಬೌಲಿಂಗ್ ದಾಳಿಯನ್ನು ನಿರ್ದಯವಾಗಿ ದಂಡಿಸಿದರು.

ಪಂಜಾಬ್‌ನ ಇಬ್ಬರು ಆರಂಭಿಕರು ಔಟಾದ ಬಳಿಕ ಯುವರಾಜ್ ಸಿಂಗ್(38) ಹಾಗೂ ನಾಯಕ ಮನ್‌ದೀಪ್ ಸಿಂಗ್(30)ತಂಡಕ್ಕೆ ಆಸರೆಯಾದರು. ಈ ಇಬ್ಬರು ತಂಡ ಗೆಲುವಿನ ಹೊಸ್ತಿಲಲ್ಲಿದ್ದಾಗ ಮುಗ್ಗರಿಸಿದರು. ಆದಾಗ್ಯೂ ಪಂಜಾಬ್ 7 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.

ಇದೇ ವೇಳೆ, ನೆರೆಯ ಆಲೂರಿನಲ್ಲಿ ನಡೆದ ಇತರ ಎರಡು ಗ್ರೂಪ್ ‘ಎ’ ಎಲೈಟ್ ಪಂದ್ಯಗಳಲ್ಲಿ ವಿದರ್ಭ ತಂಡ ಗೋವಾ ವಿರುದ್ಧ 1 ರನ್‌ನಿಂದ ರೋಚಕ ಜಯ ಸಾಧಿಸಿದೆ. ಮತ್ತೊಂದು ಪಂದ್ಯದಲ್ಲಿ ಮಹಾರಾಷ್ಟ್ರ ತಂಡ ಬರೋಡಾವನ್ನು 5 ವಿಕೆಟ್‌ಗಳಿಂದ ಸೋಲಿಸಿದೆ.

ಟೂರ್ನಮೆಂಟ್‌ನ ಕ್ವಾರ್ಟರ್ ಫೈನಲ್ ಸುತ್ತಿನ ಪಂದ್ಯಗಳು ಅ.14ರಿಂದ ಆರಂಭವಾಗಲಿದೆ. ಅಕ್ಟೋಬರ್ 17 ಹಾಗೂ 18 ರಂದು ಸೆಮಿ ಫೈನಲ್ ಹಾಗೂ ಅ.20 ಶನಿವಾರ ಫೈನಲ್ ಪಂದ್ಯ ನಡೆಯಲಿದೆ. ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News