ಹುಲಿವೇಷದ ಸುವರ್ಣ ಮಹೋತ್ಸವದಲ್ಲಿ ಮುಳಿಹಿತ್ಲು ಗೇಮ್ಸ್ ಟೀಮ್

Update: 2018-10-09 09:05 GMT

ಮಂಗಳೂರು, ಅ.9: ಮಂಗಳಾದೇವಿಯ ಮುಳಿಹಿತ್ಲು ಗೇಮ್ಸ್ ಟೀಮ್‌ನ ಹುಲಿವೇಷ ತಂಡವು 50ನೆ ವರ್ಷದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಗೌರವ ಸಲಹೆಗಾರ ದಿನೇಶ್ ಕುಂಪಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಇತ್ತೀಚೆಗೆ ಧಾರ್ಮಿಕ ಕಾರ್ಯಕ್ರಮದೊಂದಿಗೆ ಮಂಗಳಾದೇವಿ ದೇವಸ್ಥಾನದ ಧ್ವಜಸ್ತಂಭದ ಪೀಠಕ್ಕೆ ಬೆಳ್ಳಿ ಮತ್ತು ಕಂಚಿನ ಹೊದಿಕೆಯನ್ನು ಸಮರ್ಪಿಸಲಾಗಿದೆ. ಪೀಠದ ಹೊದಿಕೆಯ ಕುಸುರಿ ಕೆಲಸ ಪೂರ್ಣಗೊಂಡು ಅ.10ರಂದು ಬೆಳಗ್ಗೆ ಅದರ ಉದ್ಘಾಟನೆ ನಡೆಯಲಿದೆ ಎಂದು ಅವರು ಹೇಳಿದರು.

ಅ.12ರಂದು ರಾತ್ರಿ 8 ಗಂಟೆಗೆ ಸುವರ್ಣ ಮಹೋತ್ಸವದ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸಂದರ್ಭ ಹಿರಿಯ ಕಲಾವಿದರು ಮತ್ತು ತಂಡ ಹಾಗೂ ಇತರ ಹುಲಿವೇಷ ತಂಡದ ಹಿರಿಯರಿಗೆ ಸನ್ಮಾನವನ್ನು ಆಯೋಜಿಸಲಾಗಿದೆ. ಹುಲಿವೇಷಕ್ಕೆ ವಿಶೇಷ ಬಣ್ಣಗಾರಿಕೆಯ ಕಲಾವಿದ ಉಮೇಶ್ ಬೋಳಾರ್, ನಟ ಅರವಿಂದ ಬೋಳಾರ್ ಹಾಗೂ ಇತ್ತೀಚೆಗೆ ದುಬೈನಲ್ಲಿ ನಡೆದ ಬೆಂಚ್‌ಪ್ರೆಸ್‌ನಲ್ಲಿ ಪ್ರಶಸ್ತಿ ಪಡೆದ ಪಂಚಮಿ ಬೋಳಾರ್‌ಗೆ ಸನ್ಮಾನ ನಡೆಯಲಿದೆ ಎಂದು ಅವರು ಹೇಳಿದರು.

2000ನೆ ಇಸವಿಯಲ್ಲಿ ಜರ್ಮನ್ ಮತ್ತು ಫ್ರಾನ್ಸ್‌ನಲ್ಲಿ ನಡೆದ ಬಾಲಮೇಳ ಕಾರ್ಯಕ್ರಮಕ್ಕೆ ಭಾರತ ದೇಶವನ್ನು ಪ್ರತಿನಿಧಿಸಿದ ಕೀರ್ತಿ ತಂಡದ್ದಾಗಿರುತ್ತದೆ. ದೇಶದಲ್ಲಿ ತುರ್ತು ಸಂದರ್ಭದ ಸಮಯದಲ್ಲೂ ಮಂಗಳಾದೇವಿ ಹುಲಿವೇಷ ತಂಡದ ಗುರುಗಳಾಗಿದ್ದ ದಿ. ಉಮೇಶ್ ಮಂಗಳಾದೇವಿಯವರು ಹುಲಿ ವೇಷ ಹಾಕಿ ಮಂಗಳಾದೇವಿಯ ರಥ ಹೊರಡುವ ಸಮಯದಲ್ಲಿ ಭಕ್ತರು ತಂದ ಹಲಗೆ ಮೇಲೆ ಹುಲಿವೇಷ ಪ್ರದರ್ಶನ ಮಾಡಿ ಮಂಗಳಾದೇವಿಯ ಸೇವೆ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ಸಂಪ್ರದಾಯವನ್ನು ಮೀರದೆ ಹುಲಿವೇಷದ ಕುಣಿತ ಕ್ರಮವನ್ನು ಇತರ ಹುಲಿವೇಷ ತಂಡಕ್ಕೆ ಮಾದರಿಯಾಗುವ ರೀತಿಯಲ್ಲಿ ಪ್ರದರ್ಶಿಸುತ್ತಾ ಬರಲಾಗುತ್ತಿದೆ. ತಂಡವು ಅನೇಕ ಕಡೆ ಹುಲಿವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿದೆ. ತಂಡದ ಹುಲಿವೇಷಕ್ಕೆ ಮಂಗಳಾದೇವಿ ಮತ್ತು ಬೋಳಾರ ದೇವಸ್ಥಾನದ ಮೆರವಣಿಗೆ ಹೊರಡುವ ಸಂದರ್ಭದಲ್ಲಿ ಮೊದಲ ಪ್ರಾಶಸ್ತ್ಯವಿದೆ. ಹುಲಿವೇಷ ತಂಡ ಅ. 18ರಿಂದ 20ರವರೆಗೆ ಸತತ 3 ದಿನಗಳ ಕಾಲ ಮಂಗಳಾದೇವಿ ಮತ್ತು ಮಾರಿಯಮ್ಮನ ಸೇವೆ ಮಾಡಲಿದೆ ಎಂದು ಅವರು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಲಲಿತ್‌ರಾಜ್ ಮೆಂಡನ್, ಸಂಘಟನಾ ಕಾರ್ಯದರ್ಶಿ ಪ್ರೀತಮ್ ಪುತ್ರನ್, ಕೋಶಾಧಿಕಾರಿ ಭರತ್ ಕೋಟ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News